ಆಂಧ್ರಕ್ಕಾಗಿ ದೆಹಲಿಯಲ್ಲಿ ನಾಯ್ಡು ಉಪವಾಸ ಸತ್ಯಾಗ್ರಹ

ಆಂಧ್ರ ಪ್ರದೇಶ : ಲೋಕ ಸಮರದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಿಪಕ್ಷಗಳು ಸೆಟೆದು ನಿಂತಿವೆ. ಮೋದಿ ವಿರುದ್ಧ ಪಶ್ವಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಒಂದು, ಮೋದಿಗೆ ಧಿಕ್ಕಾರ ಕೂಗಿದ್ರೆ ಇದೀಗ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸರದಿ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡಬೇಕೆಂದು ಆಗ್ರಹಿಸಿ ಮೋದಿ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಕೂರಲು ನಾಯ್ಡು ಮುಂದಾಗಿದ್ದಾರೆ. ದೆಹಲಿಯಲ್ಲಿರುವ ಆಂಧ್ರ ಭವನದ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಲಿದ್ದು, ಈ ಸತ್ಯಾಗ್ರಹದಲ್ಲಿ ಟಿಡಿಪಿ ಸಂಸದರು, ಶಾಸಕರು, ಪರಿಷತ್​ ಸದಸ್ಯರು ಸೇರಿ ಹಲವು ಸಂಘಟನೆಗಳು ಭಾಗಿಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ನಾಯ್ಡುಗೆ ವಿಪಕ್ಷ ನಾಯಕರು ಕೂಡ ಸಾಥ್​ ನೀಡುವ ಸಾಧ್ಯತೆಗಳಿವೆ.
ನಿನ್ನೆಯಷ್ಟೇ ಆಂಧ್ರದಲ್ಲೇ ಚಂದ್ರಬಾಬು ನಾಯ್ಡುಗೆ ಮೋದಿ ಟಾಂಗ್ ಕೊಟ್ಟಿದ್ದರು. ಈ ಹಿಂದೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲಿ ಅಂತಲೇ ನಾನು ರಾಜಕೀಯದಲ್ಲಿ ಹಿರಿಯನಾಗಿದ್ರೂ, ಮೋದಿಯವರನ್ನ ಸರ್ ಅಂತ ಕರೆದಿದ್ದೆ ಅಂತ ನಾಯ್ಡು ಹೇಳಿದ್ದರು. ಇದಕ್ಕೆ ನಿನ್ನೆ ಗುಂಟೂರಿನಲ್ಲಿ ತಿರುಗೇಟು ನೀಡಿದ್ದ ಮೋದಿ, ಹೌದು ನೀವು ಸಾಕಷ್ಟು ವಿಷಯಗಳಲ್ಲಿ ಸೀನಿಯರ್. ಟಿಡಿಪಿ ಸಂಸ್ಥಾಪಕ ಎನ್​ಟಿಆರ್​ಗೆ ಬೆನ್ನಿಗೆ ಚೂರಿ ಹಾಕಿದ್ದರಲ್ಲೂ ನೀವು ಸೀನಿಯರ್ ಅಂತ ಟಾಂಗ್ ಕೊಟ್ಟಿದ್ದರು. ಇದಕ್ಕೆ ಮತ್ತೊಂದು ಸಮಾವೇಶದಲ್ಲಿ ಪ್ರತಿದಾಳಿ ಮಾಡಿದ್ದ ಚಂದ್ರಬಾಬು ನಾಯ್ಡು, ಮೋದಿ ಕುಟುಂಬದ ಬಗ್ಗೆ ಮಾತನಾಡಿದ್ರು. ಅವರು ನನ್ನ ಕುಟುಂಬದ ಬಗ್ಗೆ ಮಾತಾಡ್ತಾರೆ, ಅವರಿಗೆ ಒಬ್ಬ ಹೆಂಡತಿ ಇದ್ದಾರೆ ಅನ್ನೋದಾದ್ರೂ ಗೊತ್ತಾ? ಅವರಿಗೆ ಕುಟುಂಬ ವ್ಯವಸ್ಥೆ ಅಂದ್ರೆ ಏನು ಅಂತ ಗೊತ್ತಾ ಅಂತ ಕಿಡಿಕಾರಿದ್ದರು.
ಇದೀಗ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸರ್ ಹಾಗೂ ಸೀನಿಯರ್ ವಾರ್ ಇವತ್ತು ರಾಷ್ಟ್ರ ರಾಜಧಾನಿಗೇ ಶಿಫ್ಟ್ ಆಗಲಿದೆ. ಸದ್ಯ ಸಂಸತ್ ಬಜೆಟ್ ಅಧಿವೇಶನ ನಡೀತಿದ್ದು, ಕಲಾಪದ ಮೇಲೆ ನಾಯ್ಡುರ ಉಪವಾಸ ಸತ್ಯಾಗ್ರಹದ ಎಫೆಕ್ಟ್ ಎಷ್ಟಾಗುತ್ತೆ ಅನ್ನೋದು ಗೊತ್ತಿಲ್ಲ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv