ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣದ ಮಧ್ಯವರ್ತಿ ಗಡಿಪಾರಿಗೆ ಓಕೆ ಅಂದ ದುಬೈ ಕೋರ್ಟ್​

ನವದೆಹಲಿ: ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣದ ಬ್ರಿಟಿಷ್​ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್​ನ ಗಡಿಪಾರಿಗೆ ದುಬೈ ಕೋರ್ಟ್​ ಗ್ರೀನ್​ ಸಿಗ್ನಲ್ ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಕಲ್ ಕಳೆದ ವರ್ಷ ಬಂಧನಕ್ಕೊಳಗಾಗಿದ್ದಲ್ಲದೇ ಗಡಿಪಾರಿನ ವಿಚಾರಣೆ ಎದುರಿಸುತ್ತಿದ್ದ. ವಿವಿಐಪಿಗಳಿಗಾಗಿ ಖರೀದಿಸಲಾಗಿದ್ದ ಹೆಲಿಕಾಪ್ಟರ್​ ಒಪ್ಪಂದದಲ್ಲಿ ಮೈಕಲ್ ಭ್ರಷ್ಟಾಚಾರ ಎಸಗಿದ್ದಾನೆ ಅನ್ನೋ ಆರೋಪ ಭಾರತ ಮಾಡಿತ್ತು.

ಏನಿದು ಅಗಸ್ಟ ವೆಸ್ಟ್​ಲ್ಯಾಂಡ್ ಹಗರಣ..?

2007ರಲ್ಲಿ ಅಂದಿನ ಯುಪಿಎ ಸರ್ಕಾರ, ಉನ್ನತ ರಾಜಕೀಯ ನಾಯಕರು ಅಂದ್ರೆ ರಾಷ್ಟ್ರಪತಿ, ಪ್ರಧಾನಿ ಹಾಗೂ ಮಾಜಿ ಪ್ರಧಾನಿಗಳಿಗಾಗಿ ಒಟ್ಟು 12 ಲಕ್ಷುರಿ ಹೆಲಿಕಾಪ್ಟರ್​ಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. 2013ರಲ್ಲಿ ಅಗಸ್ಟ ವೆಸ್ಟಲ್ಯಾಂಡ್​ನ ಸಪ್ಲೈಯರ್(ಪೂರೈಕೆದಾರ) ಹಾಗೂ ಸೋದರ ಕಂಪನಿ ಇಟಲಿಯಲ್ಲಿ ಲಂಚ ನೀಡಿದೆ. ಅಲ್ಲದೇ ಭಾರತದಲ್ಲಿ ಕೆಲವರಿಗೆ ಕಿಕ್​ಬ್ಯಾಕ್ ಕೂಡ ನೀಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದ್ದರಿಂದ ಅಂದಿನ ಸರ್ಕಾರ ಒಪ್ಪಂದವನ್ನು ರದ್ದುಪಡಿಸಿ ಸಿಬಿಐ ತನಿಖೆಗೆ ವಹಿಸಿತ್ತು. ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಮಾಜಿ ವಾಯುದಳ ಮುಖ್ಯಸ್ಥ ಎಸ್​. ಪಿ.ತ್ಯಾಗಿ 2016ರಲ್ಲಿ ಅರೆಸ್ಟ್​​ ಆಗಿದ್ರು. ಕಿಕ್ ಬ್ಯಾಕ್ ಇಟಲಿಯಲ್ಲಿ ನಡೆದಿದೆ ಅಂತ ಪ್ರತಿಪಕ್ಷಗಳು ಆರೋಪ ಮಾಡಿದಾಗಲೆಲ್ಲಾ ಕಾಂಗ್ರೆಸ್​, ಆರೋಪ ಕೇಳಿ ಬಂದ ತಕ್ಷಣ ಹೆಲಿಕಾಪ್ಟರ್​ ಡೀಲ್​ನ್ನ ರದ್ದುಗೊಳಿಸಲಾಗಿದೆ. ಕಂಪನಿಯನ್ನ ಬ್ಲಾಕ್​ಲಿಸ್ಟ್​ಗೆ ಸೇರಿಸಿ, ಸಿಬಿಐ ತನಿಖೆಗೆ ಒಪ್ಪಿಸಿದ್ದಲ್ಲದೇ, ದೇಶ ಹಾಗೂ ವಿದೇಶದಲ್ಲಿದ್ದ ಸಂಸ್ಥೆಯ ಆಸ್ತಿಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ ಅಂತ ಸ್ಪಷ್ಟನೆ ಕೊಡುತ್ತಾ ಬಂದಿದೆ.

ಇನ್ನು ಭಾರತೀಯ ತನಿಖಾ ಸಂಸ್ಥೆಗಳು ಈ ಹಗರಣದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರು ತರುವಂತೆ ಒತ್ತಾಯ ಮಾಡಿದ್ದಲ್ಲದೇ ಹಾಗೆ ಮಾಡಿದ್ದಲ್ಲಿ ಮೈಕಲ್ ಮೇಲಿರೋ ಕ್ರಿಮಿನಲ್ ಕೇಸ್ ವಜಾಗೊಳಿಸೋದಾಗಿ ಹೇಳಿತ್ತು ಅಂತ ಕಳೆದ ತಿಂಗಳು ಮೈಕಲ್ ಪರ ವಕೀಲ ಆರೋಪ ಮಾಡಿದ್ರು. ಇದನ್ನು ತಳ್ಳಿ ಹಾಕಿದ್ದ ಸಿಬಿಐ ದುಬೈನಲ್ಲಿ ಮೈಕಲ್​ನನ್ನ ನಮ್ಮ ತಂಡ ಯಾವುದೇ ವಿಚಾರಣೆಗೆ ಒಳಪಡಿಸಿಲ್ಲ ಅಂತ ಸ್ಪಷ್ಟನೆ ಕೂಡ ನೀಡಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv