ಹೆಚ್​ಡಿಕೆ ನಾಟಿಗೆ ಬಂಪರ್ ಪೈರು, ಗದ್ದೆಗಿಳಿದು ಕಟಾವು ಮಾಡಲಿದ್ದಾರೆ ಸಿಎಂ

ಮಂಡ್ಯ: ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಆರಳಕುಪ್ಪೆ ಗ್ರಾಮದಲ್ಲಿ ಭತ್ತ ನಾಟಿ ಮಾಡಿದ್ದರು. ಇದೀಗ ಸಿಎಂ ನಾಟಿ ಮಾಡಿದ್ದ ಭತ್ತದ ಪೈರು ಕಟಾವಿಗೆ ಬಂದಿದೆ. ಸ್ಥಳೀಯ ರೈತರ ಒತ್ತಾಯದ ಮೇರೆಗೆ ನಾಳೆ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ಗದ್ದೆಗಿಳಿದು ಕಟಾವು ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿ ಕಂಗೆಟ್ಟಿದ್ದ ರಾಜ್ಯದ ರೈತರಿಗೆ ಆತ್ಮ ಸ್ಥೈರ್ಯ ತುಂಬುವ ಸಲುವಾಗಿ ಕಳೆದ ಆಗಸ್ಟ್11 ರಂದು ಸಿಎಂ ಕುಮಾರಸ್ವಾಮಿ ಗದ್ದೆಗಿಳಿದು ನಾಟಿ ಮಾಡಿ ಕೃಷಿಗೆ ಚಾಲನೆ ನೀಡಿದ್ದರು. ಸಿಎಂ ನಾಟಿ ಮಾಡಿದ್ದ ಭತ್ತದ ಪೈರು ಉತ್ತಮವಾಗಿ ಬೆಳೆದು ಕಟಾವಿನ ಹಂತ ತಲುಪಿದೆ. ನಾಳೆ ಮಧ್ಯಾಹ್ನ 3ಗಂಟೆಗೆ ಪಾಂಡವಪುರ ತಾಲೂಕಿನ ಆರಳಕುಪ್ಪೆ ಗ್ರಾಮಕ್ಕೆ ಸಿಎಂ ಆಗಮಿಸಿ ಭತ್ತದ ಬೆಳೆಗೆ ಪೂಜೆ ಸಲ್ಲಿಸಿ ಕಟಾವು ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ‌.

ಅರಳಕುಪ್ಪೆ ಗ್ರಾಮದ 5 ಎಕರೆ ಜಮೀನಿನಲ್ಲಿ ಸಿಎಂ ಕುಮಾರಸ್ವಾಮಿ ಭತ್ತ ನಾಟಿ ಮಾಡಿದ್ದರು. ಸಿಎಂ ನಾಟಿ ಮಾಡಿದ ಭತ್ತ ಸಮೃದ್ಧಿಯಾಗಿ ಬೆಳೆದು ನಿಂತಿರೋದ್ರಿಂದ ಅರಳಕುಪ್ಪೆ ಗ್ರಾಮದ ರೈತರು ಮುಖ್ಯಮಂತ್ರಿಗಳಿಂದಲೇ ಭತ್ತ ಕಟಾವು ಕಾರ್ಯಕ್ಕೆ ಚಾಲನೆ ಸಿಗಬೇಕೆಂದು ಒತ್ತಾಯಿಸಿದ್ದರು. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಮುಖ್ಯಮಂತ್ರಿಯನ್ನು ಒಪ್ಪಿಸಿ ನಾಳಿನ‌ ಕಟಾವು ಕಾರ್ಯಕ್ಕೆ ಕರೆತರುತ್ತಿದ್ದಾರೆ. ಸಿಎಂ ಜತೆಗೆ 50ಕ್ಕೂ ಹೆಚ್ಚು ಕೃಷಿ ಕಾರ್ಮಿಕರು ಹಾಗೂ ಜಿಲ್ಲೆಯ ಶಾಸಕರು ಸಚಿವರು ಗದ್ದೆಗಿಳಿಯಲಿದ್ದಾರೆ.

ಸಿಎಂ ನಾಟಿ ಮಾಡಿದ್ದ 5 ಎಕರೆ ಕೃಷಿ ಪ್ರದೇಶದಲ್ಲಿ ಭತ್ತ ಬೆಳೆ ಬೆಳೆದು ನಿಂತಿದೆ. ಆದರೆ, ಒಂದೇ ದಿನ 5ಎಕರೆ ಭತ್ತವನ್ನ ಕಟಾವು ಮಾಡಿ ಒಕ್ಕಣೆ ಮಾಡಲಾಗಲ್ಲ ಅನ್ನೋ ಕಾರಣಕ್ಕೆ ಜಮೀನು ಮಾಲೀಕರು ಇಂದೇ ಮೂರು ಎಕರೆ ಜಮೀನಿನ ಭತ್ತದ ಬೆಳೆಯನ್ನ ಕಟಾವು ಮಾಡಿ ಕಣದಲ್ಲಿ ರಾಶಿ ಮಾಡಲಿದ್ದಾರೆ. ಭತ್ತವನ್ನ ರಾಶಿ ಮಾಡಲಿಕ್ಕೆ ಜಮೀನು ಪಕ್ಕದಲ್ಲೇ ಕಣವನ್ನು ಸಿದ್ಧಪಡಿಸಲಾಗಿದೆ. ಇನ್ನೂ ಉಳಿದಂತೆ ಎರಡು ಎಕರೆ ಜಮೀನಿನ ಭತ್ತದ ಕಟಾವಿಗೆ ನಾಳೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಕಟಾವಿನ ಬಳಿಕ ಕಣದಲ್ಲಿ ಭತ್ತದ ರಾಶಿ ಮಾಡಿ ಒಕ್ಕಣೆ ಮಾಡಲಿದ್ದು, ಆ ರಾಶಿಗೆ ಸಿಎಂ ಹೆಚ್​ಡಿಕೆ ಪೂಜೆ ಸಲ್ಲಿಸಲಿದ್ದಾರೆ. ಕಟಾವು ಕಾರ್ಯ ಸಂಪೂರ್ಣ ಮುಗಿದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕ್ವಿಂಟಾಲ್‌ನಷ್ಟು ಭತ್ತವನ್ನು ನೀಡುವುದರ ಮೂಲಕ ಅರಳಕುಪ್ಪೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸುಗ್ಗಿಹಬ್ಬ ಆಚರಿಸಲು ನಿರ್ಧರಿಸಿದ್ದಾರೆ.

ಭತ್ತದ ಕಟಾವಿಗಾಗಿ ಸಿಎಂ ಆಗಮಿಸುವ ಹಿನ್ನೆಲೆ ಆರಳಕುಪ್ಪೆ ಜಮೀನಿನ ಬಳಿ‌ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಜಮೀನಿನ ಬಳಿ ಇರುವ ನಾಲಾ ಏರಿ ಸಿಂಗರಿಸುವ ಕಾರ್ಯ ಸಾಗಿದೆ. ಕಾವೇರಿ ನೀರಾವರಿ ನಿಗಮ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ‌.‌‌ ರೈತರಿಗೆ ಆತ್ಮವಿಶ್ವಾಸ ತುಂಬಲು ಗದ್ದೆಗಿಳಿದು ನಾಟಿ ಮಾಡಿದ್ದ ಸಿಎಂ ನಾಳೆ ಭತ್ತದ ಕಟಾವು ಕಾರ್ಯದಲ್ಲೂ ಭಾಗಿಯಾಗುತ್ತಿರುವುದಕ್ಕೆ ರೈತರು ಸಂತಸಗೊಂಡಿದ್ದಾರೆ‌.

ವಿಶೇಷ ವರದಿ: ಹೆಬ್ಬಾಕ ತಿಮ್ಮೇಗೌಡ