ನಾಳೆ ಮತದಾನ: ಘಟಾನುಘಟಿಗಳ ಭವಿಷ್ಯ ನಿರ್ಧಾರ

ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ಚುನಾವಣೆ ನಡೆಯಲಿದ್ದು, ಮತದಾರರು ಘಟನಾಘಟಿ ರಾಜಕಾರಣಿಗಳ ಮುಂದಿನ ಭವಿಷ್ಯವನ್ನು ಬರೆಯಲಿದ್ದಾರೆ. ಹ್ಯಾಟ್ರಿಕ್ ಹಿರೋಗಳಾದ ಶಾಸಕ ಸಿ.ಟಿ. ರವಿ, ಡಿ.ಎನ್. ಜೀವರಾಜ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪರಮ ಆಪ್ತ ವೈಎಸ್‍ವಿ ದತ್ತ, ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್. ಶಂಕರ್, ವಿಧಾನಪರಿಷತ್ ಸದಸ್ಯೆ ಮೋಟಮ್ಮ, ಶಾಸಕರಾದ ಶ್ರೀನಿವಾಸ್, ಬಿ.ಬಿ. ನಿಂಗಯ್ಯ ಸೇರಿದಂತೆ ಚುನಾವಣಾ ಕಣದಲ್ಲಿರುವ 60 ಮಂದಿ ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಬರೆಯಲಿದ್ದಾರೆ.
ಜಿಲ್ಲೆಯಲ್ಲಿ 9,37,199 ಮತದಾರರು ಇದ್ದು, ಮತದಾನಕ್ಕಾಗಿ ಜಿಲ್ಲಾಡಳಿತ 1210 ಮತಗಟ್ಟೆ ಕೇಂದ್ರಗಳನ್ನು ತೆರೆದಿದೆ. ಚುನಾವಣಾ ಕರ್ತವ್ಯಕ್ಕಾಗಿ 6685 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇಂದು ಬೆಳ್ಳಿಗೆಯಿಂದಲೇ ತಾಲೂಕು ಕೇಂದ್ರಗಳಿಂದ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು. ನಾಳೆ ಜಿಲ್ಲೆಯಾದ್ಯಂತ ಮತದಾನ ನಡೆಯಲಿದೆ.
ಜಿಲ್ಲೆಯಲ್ಲಿ 2,99,173 ಕುಟುಂಬಗಳಿದ್ದು, 9,37,199 ಮತದಾರರು ಇದ್ದಾರೆ. ಈ ಪೈಕಿ 4,67,851 ಪುರುಷ, 4,69,290 ಮಹಿಳೆಯರು, 58 ಇತರೆ ಮತದಾರರು ಇದ್ದಾರೆ. ಎಲ್ಲಾ ಕುಟುಂಬಗಳಿಗೆ ಮತದಾರರ ಮಾರ್ಗದರ್ಶಿಯನ್ನು ವಿತರಣೆ ಮಾಡಲಾಗಿದೆ.
ಮತದಾರರ ಸಂಖ್ಯೆಗೆ ಅನುಗುಣವಾಗಿ 1210 ಮತಗಟ್ಟೆಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ಶೃಂಗೇರಿ ಕ್ಷೇತ್ರದಲ್ಲಿ 254, ಮೂಡಿಗೆರೆ 230, ಚಿಕ್ಕಮಗಳೂರು 251, ತರೀಕೆರೆ 231, ಕಡೂರು ವಿಧಾನಸಭಾ ಕ್ಷೇತ್ರಗಳಲ್ಲಿ 244 ಮತಗಟ್ಟೆಗಳನ್ನು ತೆರೆಯಲಾಗಿದೆ.
ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 18 ಮಂದಿ ಸ್ಪರ್ಧೆ ಮಾಡಿದ್ದಾರೆ. ಬ್ಯಾಲಟ್ ಯೂನಿಟ್ ಯಂತ್ರದಲ್ಲಿ 16 ಮಂದಿ ಅಭ್ಯರ್ಥಿಗಳ ಹೆಸರನ್ನು ಮಾತ್ರ ಅಳವಡಿಸಲು ಅವಕಾಶ ಇದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ 18 ಮಂದಿ ಇರುವುದರಿಂದ ಪ್ರತಿ ಮತಗಟ್ಟೆಗೆ ತಲಾ 2 ರಂತೆ ಬ್ಯಾಲಟ್ ಯೂನಿಟ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಈಗಾಗಲೇ ರಾಜಕೀಯ ಪಕ್ಷಗಳಿಗೆ ಮಾಹಿತಿಯನ್ನು ಸಹ ನೀಡಿದೆ.
ಚುನಾವಣಾ ಕರ್ತವ್ಯಕ್ಕಾಗಿ 6685 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇಂದು ಬೆಳ್ಳಿಗೆಯಿಂದಲೇ ತಾಲೂಕು ಕೇಂದ್ರಗಳ ಮತಗಟ್ಟೆ ಕೇಂದ್ರಕ್ಕೆ ತೆರಳಲಿದ್ದಾರೆ.
ಚಿಕ್ಕಮಗಳೂರು ನಗರಸಭೆಯ ವ್ಯಾಪ್ತಿಯಲ್ಲಿ ಒಟ್ಟು 10 ಹಾಗೂ ಗ್ರಾಮಾಂತರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 2 ರಂತೆ ಒಟ್ಟು 20 ಮಹಿಳಾ ಮತಗಟ್ಟೆಗಳನ್ನು (ಪಿಂಕ್) ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೆ ತಲಾ ಒಂದರಂತೆ ಜ್ವರ, ನೋವು ನಿವಾರಕ, ಅಲರ್ಜಿ ಮಾತ್ರೆಗಳು ಒಳಗೊಂಡ ವೈದ್ಯಕೀಯ ವ್ಯವಸ್ಥೆಯ ಕಿಟ್‍ಗಳ ವಿತರಣೆ ವ್ಯವಸ್ಥೆಯನ್ನೂ ಚುನಾವಣಾ ಆಯೋಗ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ 475 ಮತಗಟ್ಟೆಗಳಲ್ಲಿ ವಿಕಲಚೇತನರಿಗೆ ಮತದಾನ ಮಾಡಲು ವೀಲ್ ಚೇರ್​ಗಳ ಅವಶ್ಯಕತೆ ಇದ್ದು, ಜಿಲ್ಲೆಯಲ್ಲಿ 171 ವೀಲ್ ಚೇರ್​ಗಳಿದ್ದು, ಕೊರತೆಯಿರುವ 304 ವೀಲ್ ಚೇರ್​ಗಳನ್ನು ಖರೀದಿ ಮಾಡಲು ಜಿಲ್ಲಾಡಳಿತವು, ಜಿಲ್ಲಾ ಪಂಚಾಯ್ತಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯ ಪೊಲೀಸ್‍ಗಳ ಜತೆಗೆ ಕೇಂದ್ರೀಯ ಮೀಸಲು ಪಡೆಯ ಪುರುಷ ಹಾಗೂ ಮಹಿಳೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಕ್ಷೇತ್ರ ಮತದಾರರು

ಶೃಂಗೇರಿ 166026
ಮೂಡಿಗೆರೆ 170250
ಚಿಕ್ಕಮಗಳೂರು 216230
ತರೀಕೆರೆ 182853
ಕಡೂರು 201840