‘ಸೈನಿಕ’ನಿಗೆ ಸೋಲುಣಿಸಲು ‘ಪವರ್’ ಜೊತೆ ಕೈ ಜೋಡಿಸಿದ್ರಾ ‘ದಳ’ಪತಿ?

ಬೆಂಗಳೂರು: ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂಬ ಮಾತಿದೆ. ಇದು ಕರ್ನಾಟಕದ ರಾಜಕಾರಣದಲ್ಲಿ ಹಲವು ಬಾರಿ ಸತ್ಯವಾಗಿದೆ. ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ರಾಮನಗರ-ಚನ್ನಪಟ್ಟಣ ರಾಜಕೀಯದಲ್ಲಿ ಈ ಮಾತು ನಿಜವಾಗೋ ಲಕ್ಷಣಗಳು ಕಾಣಿಸ್ತಿವೆ. ಯಾಕಂದ್ರೆ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿಯವರು ಚನ್ನಪಟ್ಟಣ ಮತ್ತು ರಾಮನಗರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದು, ಈ ದ್ವಿಕ್ಷೇತ್ರ ಸ್ಪರ್ಧೆಯ ಹಿಂದೆ ಭಾರೀ ರಾಜಕೀಯ ಲೆಕ್ಕಾಚಾರಗಳು ಅಡಗಿರೋದು ಸ್ಪಷ್ಟವಾಗ್ತಿದೆ. ಈ ಲೆಕ್ಕಾಚಾರದ ಹಿಂದಿರೋ ಗುರಿ ಒಂದೇ. ಚನ್ನಪಟ್ಟಣದಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿರೋ ಸಿ.ಪಿ ಯೋಗೇಶ್ವರ್‌ಗೆ ಸೋಲಿನ ರುಚಿ ತೋರಿಸೋದು.

ಯೋಗೀಶ್ವರ್‌ಗೆ “ಪವರ್” ಪಂಚ್

ಕಾಂಗ್ರೆಸ್ ತೊರೆದು ಕಮಲ ಹಿಡಿದಿರುವ ಸಿ.ಪಿ ಯೋಗೇಶ್ವರ್ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದ್ದರು. ಚನ್ನಪಟ್ಟಣಕ್ಕೆ ಮತ ಕೇಳಲು ಬಂದರೆ ಜನ ಪೊರಕೆ ಏಟು ಕೊಡ್ತಾರೆ ಅಂತ ಯೋಗೇಶ್ವರ್‌ ಹೇಳಿದ್ದರು. ಇದೇ ಮಾತನ್ನ ಸವಾಲಾಗಿ ತಗೊಂಡಿರೋ ಡಿ.ಕೆ. ಶಿವಕುಮಾರ್‌, ಯೋಗೀಶ್ವರ್‌ಗೆ ಪಂಚ್‌ ಕೊಡಲು ತಯಾರಾಗಿದ್ದಾರೆ. ಅದಕ್ಕೆ ತಕ್ಕಂತೆ ಹೆಚ್‌.ಡಿ. ಕುಮಾರಸ್ವಾಮಿ ಕೂಡ ಚನ್ನಪಟ್ಟಣದಲ್ಲೂ ಸ್ಪರ್ಧಿಸೋ ತೀರ್ಮಾನ ತಗೊಂಡಿರೋದು ಇಬ್ಬರ ಗುರಿಯೂ ಒಂದೇ ಅನ್ನೋದನ್ನ ಸಾಬೀತು ಮಾಡಿದೆ.

ಸಿ.ಪಿ.ವೈ ಬೆಳವಣಿಗೆಗೆ ಬ್ರೇಕ್ ಹಾಕುವ ತಂತ್ರವೇ?

ಸಿ.ಪಿ ಯೋಗೇಶ್ವರ್‌ಗೆ ಈ ಬಾರಿಯ ಚುನಾವಣೆ ಅಗ್ನಿ ಪರೀಕ್ಷೆ ಎಂದೇ ಹೇಳಿದರೆ ತಪ್ಪಾಗಲಿಕ್ಕಿಲ್ಲ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ರಾಜಕಾರಣಿಯಾಗಿ ಸದ್ದು ಮಾಡುತ್ತಿರುವ ಸಿ.ಪಿ ಯೋಗೇಶ್ವರ್ ಅವರನ್ನ  ರಾಜಕೀಯವಾಗಿ ಬಗ್ಗು ಬಡಿಯಲು ಹೆಚ್.ಡಿ.ಕೆ ಹಾಗೂ ಪವರ್ ಮಿನಿಸ್ಟರ್ ಡಿ.ಕೆ.ಶಿ ಕೈಜೋಡಿಸಿದ್ದಾರೆಂದು ರಾಜಕೀಯ ವಲಯದಲ್ಲಿ ಚರ್ಚೆಯಾಗ್ತಿದೆ. ಯಾಕಂದ್ರೆ ಒಕ್ಕಲಿಗ ಮತಗಳೇ ಹೆಚ್ಚಿರುವ ಕಾರಣದಿಂದ ಇಲ್ಲಿನ ಮತದಾರರಿಗೆ ಜೆಡಿಎಸ್​ ಬಗ್ಗೆ ಕೊಂಚ ಒಲವು ಹೆಚ್ಚು. ಅದರಲ್ಲೂ ಜೆಡಿಎಸ್​ನ ಮುಖ್ಯಮಂತ್ರಿ ಅಭ್ಯರ್ಥಿಯಾದ ಕುಮಾರಸ್ವಾಮಿಯವರೇ ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವುದು ಸಿಪಿ ಯೋಗೀಶ್ವರ್​ ಅವರ ಭವಿಷ್ಯದ ರಾಜಕಾರಣಕ್ಕೆ ಮಾರಕವಾಗುವ ಸಾಧ್ಯತೆಯೇ ಹೆಚ್ಚು.

ಡಿ.ಕೆ.ಶಿ ಬಗ್ಗೆ ‘ದಳ’ಪತಿ ಸಾಫ್ಟ್ ಕಾರ್ನರ್

ರಾಜ್ಯ ರಾಜಕಿಯದಲ್ಲಿ ಹಾವು ಮುಂಗುಸಿಯಂತಿದ್ದ ಡಿ.ಕೆ.ಶಿವಕುಮಾರ್‌ ಹಾಗೂ ದೇವೆಗೌಡರ ಕುಟುಂಬದ ನಡುವೆ ಇತ್ತೀಚೆಗೆ ಪರಸ್ಪರ ಗೌರವ ಭಾವನೆಗಳು ಹೆಚ್ಚಾಗಿವೆ. ಪರಸ್ಪರ ವಾಕ್ಸಮರ ನಡೆಸುತ್ತಿದ್ದ ಉಭಯ ನಾಯಕರೀಗ  ಕದನ ವಿರಾಮ ಘೋಷಿಸಿಕೊಂಡಂತಾಗಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಯಕ್ರಮದಲ್ಲಿ  ಡಿ.ಕೆ. ಶಿವಕುಮಾರ್ ಅವರು ಮಾಜಿ ಪ್ರಧಾನಿ ದೇವೆಗೌಡರ ಪಾದ ಮುಟ್ಟಿ ನಮಸ್ಕರಿಸಿದ್ದರು.

ಇತ್ತೀಚೆಗಷ್ಟೇ ಅನಿತಾ ಕುಮಾರಸ್ವಾಮಿಯವರನ್ನು ಡಿ.ಕೆ.ಶಿವಕುಮಾರ್ ಸಹೋದರಿ ಎಂದು ಕರೆದಿದ್ದರು. ಇದಲ್ಲದೆಯೂ ಹೆಚ್‌.ಡಿ. ಕೆ. ಮತ್ತು ಶಿವಕುಮಾರ್ ಹಲವು ಬಾರಿ ಪರಸ್ಪರ  ಭೇಟಿಯಾಗಿದ್ದಿದೆ. ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದಿದೆ.  ಈ ಎಲ್ಲಾ ಬೆಳವಣಿಗೆಗಳು ಡಿ.ಕೆ. ಶಿವಕುಮಾರ್ ಮೇಲೆ ದೇವೆಗೌಡರಿಗೆ ಸಾಫ್ಟ್ ಕಾರ್ನರ್ ಬಂದಿದೆ. ಇಬ್ಬರ ಹೊಂದಾಣಿಕೆ ರಾಜಕೀಯವೂ ನಡೆಯುತ್ತಿದೆ ಅಂತಾ ಸುದ್ದಿಯಾಗಲು ಕಾರಣವಾಗಿದೆ. ಈಗ ಕುಮಾರಸ್ವಾಮಿಯವರು ಡಿ.ಕೆ ಟಾರ್ಗೆಟ್ ಆಗಿರುವ ಸಿ.ಪಿ ಯೋಗೇಶ್ವರ್ ಕ್ಷೇತ್ರದಲ್ಲೇ ಸ್ಪರ್ದಿಸಲು ನಿರ್ಧರಿಸಿರೋದು ಈ ಎಲ್ಲ ಚರ್ಚೆಗಳಿಗೆ ಮತ್ತಷ್ಟು ಪುಷ್ಟಿ ಒದಗಿಸಿದೆ.  ಆದ್ರೆ ಡಿ.ಕೆ.ಶಿ. ಹಾಗೂ ಹೆಚ್.ಡಿ.ಕೆ ರಣತಂತ್ರಕ್ಕೆ ಸಿ.ಪಿ ಯೋಗೇಶ್ವರ್ ಯಾವ ರೀತಿ ತಿರುಗೇಟು ನೀಡುವರೋ ಅನ್ನೋದೇ ಚುನಾವಣೆಯ ಕುತೂಹಲವಾಗಿರಲಿದೆ.

Leave a Reply

Your email address will not be published. Required fields are marked *