ಪ್ರವಾಸಿಗರ ಹಾಟ್‍ಸ್ಪಾಟ್ ಕೊಡಗಿನಲ್ಲಿ ಜಲವೈಯ್ಯಾರಿಯ ಸೊಬಗು

ಕೊಡಗು: ಹಾಲಿನೋಕುಳಿಯಂತೆ ಧುಮ್ಮಿಕ್ಕುಳ ನೀರು. ನಿರ್ಜನ ಪ್ರದೇಶದಲ್ಲಿ ಜುಳುಜುಳು ನಿನಾದದೊಂದಿಗೆ ಜಲವೈಯ್ಯಾರ ಸೊಬಗನ್ನು ಸೂಸುತ್ತಿದ್ರೆ ಆನಂದಿಸುವ ಮನಸ್ಸಿಗೆ ಇನ್ನೇನು ಬೇಕು ಹೇಳಿ. ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹೊಸಕಳೆ ಕಂಡುಕೊಳ್ಳುವ ಜಲಪಾತಗಳಿಗೇನು ಕೊರತೆಯಿಲ್ಲ. ವಿರಾಜಪೇಟೆ ತಾಲೂಕಿನ ಚೇಲಾವರ ಫಾಲ್ಸ್ ಕೂಡಾ ಮೈತುಂಬಿ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಕೊಡಗು ಪ್ರವಾಸಿಗರ ಹಾಟ್‍ಸ್ಪಾಟ್. ಅದರಲ್ಲೂ ಮಳೆಗಾಲದಲ್ಲಿ ಕೊಡಗಿಗೆ ಭೇಟಿ ಕೊಡೋದಕ್ಕೆ ಪ್ರವಾಸಿಗರು ತುದಿಗಾಲಿನಲ್ಲಿ ನಿಂತಿರ್ತಾರೆ. ಇದಕ್ಕೆ ಮುಖ್ಯ ಕಾರಣ ಮಳೆಗೆ ಹೊಸಕಳೆ ಕಂಡುಕೊಳ್ಳುವ ಇಲ್ಲಿನ ಪ್ರವಾಸಿತಾಣಗಳು. ಅದರಲ್ಲೂ ಇಲ್ಲಿನ ಜಲಪಾತಗಳ ಸೊಬಗನ್ನ ಕಣ್ತುಂಬಿಕೊಳ್ಳೋದೇ ಚಂದ. ಇದೀಗ ವಿರಾಜಪೇಟೆ ತಾಲೂಕಿನ ಚೇಲಾವರ ಫಾಲ್ಸ್ ಕೂಡಾ ತನ್ನ ಎಂದಿನ ಸೌಂದರ್ಯವನ್ನು ತುಂಬಿಕೊಂಡು ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಸುತ್ತಲೂ ಅರಣ್ಯ, ವಿಶಾಲ ಬಂಡೆಯ ಮೇಲಿಂದ ಧುಮ್ಮಿಕ್ಕುವ ಜಲಪಾತ ಸೌಂದರ್ಯ ಇತರೆ ಫಾಲ್ಸ್​ಗಳಿಗೆ ಹೋಲಿಸಿದ್ರೆ ಭಿನ್ನವಾಗಿದೆ. ಮಡಿಕೇರಿಯಿಂದ 30 ಕಿಮೀ ದೂರದಲ್ಲಿರುವ ನರಿಯಂದಡ ಗ್ರಾಮ ಪಂಚಾಯ್ತಿಯ ಚೇಲಾವರ ಗ್ರಾಮದಲ್ಲಿ ಈ ಫಾಲ್ಸ್ ಇದೆ. ಮುಖ್ಯ ರಸ್ತೆಯಿಂದ ಕಡಿದಾದ ಕಚ್ಛಾ ರಸ್ತೆಯಲ್ಲಿ ನಡೆದು ಸಾಗಿದ್ರೆ ಖಾಸಗಿ ಕಾಫಿ ತೋಟದೊಳಗೆ ಜಲಪಾತದ ಸೌಂದರ್ಯ ಸಿರಿ ಕಾಣೋದಕ್ಕೆ ಸಿಗುತ್ತೆ. ತಳಭಾಗದಿಂದ ನಿಂತು ಧುಮ್ಮಿಕ್ಕುವ ಜಲಸೊಬಗನ್ನು ನೋಡುತ್ತಾ, ಭೋರ್ಗರೆತದ ನೀರಿನ ರಭಸಕ್ಕೆ ಸಿಂಚನವಾಗುವ ನೀರಿನ ಹನಿಗಳು ಮೈಸೋಕುತ್ತಿದ್ದರೆ ಮೈ-ಮನ ಪುಳಕಿತಗೊಳ್ಳುತ್ತದೆ. ಇಂಥ ರೊಮನಾಂಚನಕಾರಿ ದೃಶ್ಯ ನೋಡೋಕೆ ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಇಲ್ಲಿ ಧುಮ್ಮಿಕ್ಕುವ ನೀರು ಕರಡ ಹೊಳೆ ಮೂಲಕ ಕಾವೇರಿ ನದಿಗೆ ಸೇರ್ಪಡೆಯಾಗುತ್ತದೆ.

ಸುಮಾರು 50 ಅಡಿ ಎತ್ತರದಿಂದ 80 ಅಡಿ ಅಗಲವಾಗಿ ಧುಮ್ಮಿಕ್ಕುವ ಜಲಪಾತ ಅಷ್ಟೇ ಅಪಾಯಕಾರಿ ಕೂಡಾ. ಫಾಲ್ಸ್​ಸ್‍ನ ತಳಭಾಗಕ್ಕೆ ತೆರಳಿ ಫೋಟೋ ತೆಗೆಯುವ ಸಂದರ್ಭ ಜಾರಿ ಬಿದ್ದು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಫಾಲ್ಸ್ ಕೆಳಗೆ ಹೋಗೋದನ್ನ ನಿಷೇಧಿಸಲಾಗಿದೆ. ಇಲ್ಲಿಗೆ ಬರುವ ಮಂದಿ ಎಂಜಾಯ್ ಮಾಡುವ ಜತೆಗೆ ಎಚ್ಚರ ವಹಿಸಬೇಕಾದ ಅಗತ್ಯ ಕೂಡಾ ಇದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv