ಜೋಳದ ಜಮೀನಿಗೆ ಬಂದ ಚಿರತೆಗೆ ಎಂಥಾ ಗತಿ ಬಂತು?

ಕೊಳ್ಳೇಗಾಲ: ಕಳೆದ ಕೆಲ ಸಮಯದಿಂದ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಚಿರತೆಗಳ ಚಲನವಲನ ಹೆಚ್ಚಾಗಿದ್ದು, ಹಲವು ಮೇಕೆ, ಕುರಿ, ನಾಯಿಗಳು ಬಲಿಯಾಗಿವೆ. ಈ ನಡುವೆ ಆಹಾರ ಅರಸಿ ಊರಿಗೆ ನುಗ್ಗಲು ಯತ್ನಿಸಿದ ಚಿರತೆಯೊಂದು ಅನ್ಯಾಯವಾಗಿ ವಿದ್ಯುತ್‌ ತಗುಲಿ ಮೃತ ಪಟ್ಟಿರುವ ಘಟನೆ ತಿಮ್ಮರಾಜೀಪುರ ಜೋಳದ ಜಮೀನಿನಲ್ಲಿ ಶನಿವಾರ ಸಂಭವಿಸಿದೆ.

ಜೋಳದ ಜಮೀನಿನಲ್ಲಿ ವಿದ್ಯುತ್ ತಂತಿ ಸ್ಪರ್ಶದಿಂದ ನಾಲ್ಕು ವರ್ಷದ ಗಂಡು ಚಿರತೆ ಮೃತಪಟ್ಟಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಎಫ್ ರುದ್ರಾಯನ್, ಎಸಿಎಫ್ ನಾಗರಾಜು, ಶಂಕರ್, ಆರ್‍ಎಫ್‍ಒಗಳಾದ ಧನುಷ್, ಪ್ರಭುಸ್ವಾಮಿ, ಚೆಸ್ಕಾಂ ಎಇಇ ಲಿಂಗರಾಜು, ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‍ಐ ವನರಾಜು, ಪಶುವೈದ್ಯ ಇಲಾಖೆಯ ವೈದ್ಯರಾದ ಡಾ. ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜಮೀನಿನ ಮಾಲೀಕ ಸುರೇಶ್‍, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರೋದು ಕಂಡು ಬಂದ ಹಿನ್ನೆಲೆಯಲ್ಲಿ ಚಿರತೆ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ದೇಹವನ್ನು ಅರಣ್ಯ ಇಲಾಖೆಯವರೇ ಸುಟ್ಟು ಹಾಕಿದ್ದಾರೆ.

Leave a Reply

Your email address will not be published. Required fields are marked *