ವೈದ್ಯ ಅಂತಾ ನಂಬಿದ್ದಕ್ಕೆ ಜ್ಯೂವೆಲರ್ಸ್ ಮಾಲೀಕನಿಗೆ ಬಿತ್ತು ಉಂಡೆನಾಮ ..!

ಬೆಂಗಳೂರು: ಖದೀಮನೊಬ್ಬ ವೈದ್ಯ ಎಂದು ಹೇಳಿಕೊಂಡು ಜ್ಯೂವೆಲರ್ಸ್ ​ಶಾಪ್​ಗೆ ಉಂಡೆನಾಮ ಹಾಕಿರುವ ಘಟನೆ ಜಯನಗರದ ಸುಲ್ತಾನ್ ಜ್ಯೂವೆಲರ್ಸ್​ನಲ್ಲಿ ನಡೆದಿದೆ. ಇದೇ ತಿಂಗಳ 5ನೇ ತಾರೀಕು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೊದಲು ಜ್ಯೂವೆಲರ್ಸ್​ ಶಾಪ್​ಗೆ ಬಂದ ಕಳ್ಳ, ತಾನು ಅಪೋಲೊ ಆಸ್ಪತ್ರೆಯ ವೈದ್ಯ ಶ್ರೀನಿವಾಸ್ ಎಂದು ಹೇಳಿಕೊಂಡಿದ್ದ. ನಂತರ ಚಿನ್ನದ ಸರವನ್ನು ಕೊಂಡುಕೊಳ್ಳೋದಾಗಿ ನಟಿಸಿ, ₹ 77 ಸಾವಿರ ಬೆಲೆಯ ಚಿನ್ನದ ಸರವನ್ನ ತೆಗೆದುಕೊಳ್ಳುತ್ತೇನೆಂದು ಕೌಂಟರ್​ಗೆ ತೆರಳಿ ಡೆಬಿಟ್ ಕಾರ್ಡ್ ನೀಡಿದ್ದ.

ಆದ್ರೆ ಅದರಲ್ಲಿ ಕಡಿಮೆ ಹಣ ಇದೆ ಅಂತಾ ಡ್ರಾಮಾ ಮಾಡಿದ್ದ. ಕೊನೆಗೆ ನಿಮ್ಮ ಸಿಬ್ಬಂದಿಯೊಬ್ಬರನ್ನ ನನ್ನ ಜೊತೆ ಪಕ್ಕದಲ್ಲೇ ಇರುವ ಅಪೊಲೋ ಆಸ್ಪತ್ರೆಗೆ ಕಳುಹಿಸಿ ಕೊಡಿ, ಹಣ ಕೊಡ್ತೀನಿ ಎಂದಿದ್ದ. ಆತನ ಮಾತು ನಂಬಿದ್ದ ಜ್ಯೂವೆಲರ್ಸ್​ ಮಾಲೀಕ, ಒಂದು ಬಾಕ್ಸ್​ನಲ್ಲಿ ಸರವನ್ನಿಟ್ಟು ಸಿಬ್ಬಂದಿಗೆ ಕೊಟ್ಟು ಕಳುಹಿಸಿದ್ದರು. ಆಸ್ಪತ್ರೆಗೆ ತೆರಳಿದ ನಂತರ ಖದೀಮ ನೀನು ರಿಸೆಪ್ಷನ್​ನಲ್ಲಿ ಕುಳಿತಿರು. ನಾನು ಡಾಕ್ಟರ್ಸ್ ಕ್ಯಾಬಿನ್ ಒಳಗೆ ಹೋಗಿ ಹಣ ತಂದು ಕೊಡ್ತೀನಿ ಅಂತಾ ಹೇಳಿ ಚಿನ್ನದ ಸರವನ್ನ ಅಂಗಡಿಯ ಸಿಬ್ಬಂದಿಯಿಂದ ಪಡೆದುಕೊಂಡು ಒಳಹೋಗಿದ್ದ.

ನಂತರ ಎಮರ್ಜೆನ್ಸಿ ಎಕ್ಸಿಟ್​ನಿಂದ ಎಸ್ಕೇಪ್ ಆಗಿದ್ದಾನೆ. ಇತ್ತ, ವೈದ್ಯ ಹಣ ತರುತ್ತಾನೆ ಎಂದು ಕಾದು ಕುಳಿತಿದ್ದ ಸಿಬ್ಬಂದಿ 1 ಗಂಟೆಯಾದರೂ ಆತ ಬಾರದಿದ್ದಾಗ ರಿಸೆಪ್ಷನ್​ಗೆ ಹೋಗಿ ವಿಚಾರಿಸಿದ್ದಾನೆ. ಆಗ ಆ ಹೆಸರಿನ ಡಾಕ್ಟರ್​ ಇಲ್ಲಿ ಯಾರೂ ಇಲ್ಲಾ ಅಂತಾ ರಿಸೆಪ್ಷನಿಸ್ಟ್​ ಹೇಳಿದ್ದಾರೆ. ವಿಷಯ ತಿಳಿದ ಕೂಡಲೇ ಜ್ಯೂವೆಲರ್ಸ್​ ಮಾಲೀಕ ಜಯನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv