ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯನ್ನೇ ಮರುಸ್ಥಾಪಿಸಲು ಹೊರಟಿದ್ದ ದಂಧೆಕೋರರು..!

ದಾವಣಗೆರೆ: ದುಡ್ಡಿಗೋಸ್ಕರ ನಾನಾ ರೀತಿಯ ಖತರ್ನಾಕ್ ಕೆಲಸ ಮಾಡೋ ಗ್ಯಾಂಗ್​ಗಳ ಬಗ್ಗೆ ಕೇಳಿರ್ತೀರಾ. ಆದ್ರೆ ಇದು ಮಾತ್ರ ನೀವು ಹಿಂದೆಂದೂ ನೋಡಿರದ ಹೊಸ ದಂಧೆ. ಈ ದಂಧೆಕೋರರು ರಾಜ್ಯದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯನ್ನ ಮರು ಸ್ಥಾಪಿಸಲು ಹೊರಟಿದ್ದರು ಅಂದ್ರೆ ನಂಬ್ತೀರಾ.. ನಂಬಲೇಬೇಕು.

ಈಸ್ಟ್ ಇಂಡಿಯಾ ಕಂಪನಿಗೂ ಈ ಗ್ಯಾಂಗ್​ಗೂ ಇದ್ದ ಸಂಬಂಧವೇನು ?
ವಂಚಕರ ಜಾಲವೊಂದು ದಶಕಗಳ ಹಳೆಯ ಈಸ್ಟ್ ಇಂಡಿಯಾ ಕಂಪನಿಯ ನಕಲಿ ಬಾಂಡ್ ಪೇಪರ್​ ತಯಾರಿಸಿ ರೈತರಿಗೆ ಟೋಪಿ ಹಾಕಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಬ್ರಿಟಿಷರ ಕಾಲದಲ್ಲಿ ಈಸ್ಟ್ ಇಂಡಿಯಾ ಕಂಪನಿ ರೈತರ ಜೊತೆ ಒಪ್ಪಂದ ಮಾಡಿಕೊಂಡಿದ್ದ ಪತ್ರಗಳನ್ನ ನಕಲಿ ಮಾಡಿ, ಈ ಬಾಂಡ್ ಪೇಪರ್​ಗಳಿಗೆ ಈಗಲೂ ಮಾನ್ಯತೆ ಇದೆ ಅಂತ ನಂಬಿಸಿ ಜನರನ್ನು ವಂಚಿಸುತ್ತಿದ್ರು. ಆದರೆ ಈಸ್ಟ್ ಇಂಡಿಯಾ ಕಂಪನಿಯ ಡೂಪ್ಲಿಕೇಟ್ ಆಟೋ ಫೈರ್ ಬಾಂಡ್ ಮಾರಾಟ ಮಾಡುವಾಗಲೇ 11 ಮಂದಿ ಡಿಸಿಬಿ‌ ವಿಶೇಷ ಪೊಲೀಸ್ ತಂಡದ ಬಲೆಗೆ ಬಿದ್ದಿದ್ದಾರೆ.

ಈಸ್ಟ್ ಇಂಡಿಯಾ ಕಂಪನಿಯ ‌ಡೂಪ್ಲಿಕೇಟ್ ಬಾಂಡ್ ಪೇಪರ್, ಬಿಳಿ‌ ರಂಜಕ‌ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರು ಶಿವಮೊಗ್ಗ, ದಾವಣಗೆರೆ ಮತ್ತು ಬಳ್ಳಾರಿ ಮೂಲದವರಾದ ರಾಘವೇಂದ್ರ, ಶಿವಕುಮಾರ್, ಸತ್ಯಗೋವಿಂದರಾಜ, ರೇವಣಸಿದ್ಧಯ್ಯ, ಪ್ರಭು, ದ್ರಾವಿಡ, ಉಮೇಶ್, ಮಾರುತಿ, ನಂದು, ಆನಂದ್ ಎಂದು ಗುರುತಿಸಲಾಗಿದೆ. ಇವರಲ್ಲಿ ರಾಘವೇಂದ್ರ, ಶಿವಕುಮಾರ್ ಮತ್ತು ರೇವಣಸಿದ್ದಯ್ಯ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ. ಯೂಟ್ಯೂಬ್​ನಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಬಾಂಡ್ ನೋಡಿಕೊಂಡು ಅದೇ ರೀತಿ ತಯಾರು ಮಾಡುತ್ತಿದ್ದೆವು ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv