ಚಾರ್ಮಾಡಿ ಘಾಟ್​​ನಲ್ಲಿ ಗುಡ್ಡ ಕುಸಿತ: ಪ್ರಯಾಣಿಕರಿಗೆ 3 ಬದಲಿ ಮಾರ್ಗಗಳು

ಮಂಗಳೂರು: ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್​​ನಲ್ಲಿ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿತ್ತು. ಸೋಮವಾರ ರಾತ್ರಿ 1.30 ವೇಳೆಗೆ ಗುಡ್ಡ ಕುಸಿದು, ಸುಮಾರು 13 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಚಿಕ್ಕಮಗಳೂರು ಹಾಗೂ ಮಂಗಳೂರು ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರ ನೆರವಿನಿಂದ ಮಂಗಳವಾರ 3 ಗಂಟೆಯ ವೇಳೆಗೆ ಸಂಚಾರ ಮುಕ್ತಗೊಳಿಸಲಾಯಿತು.ಇನ್ನೂ ಸದ್ಯ ಇಂದು ಮತ್ತೆ ನಾಳೆ ಚಾರ್ಮಾಡಿ ಘಾಟ್ ಬಂದ್ ಮಾಡಲಾಗಿದ್ದು ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ಪರ್ಯಾಯವಾಗಿ 3 ಮಾರ್ಗಗಳ ವ್ಯವಸ್ಥೆ
ಬೆಂಗಳೂರಿನಿಂದ ಮಂಗಳೂರು ಕಡೆ ಬರುವವರು ಚಿಕ್ಕಮಗಳೂರಿನಿಂದ ಬಾಳೆಹೊನ್ನೂರು, ಕೊಪ್ಪ, ಆಗುಂಬೆ, ಹೆಬ್ರಿ, ಕಾರ್ಕಳವಾಗಿ ಮಂಗಳೂರು ತಲುಪಬಹುದಾಗಿದೆ.
ಇನ್ನೊಂದೆಡೆ ದಾರಿ ಎಂದರೆ, ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಜಾವಳಿ, ಕಳಸ, ಕುದುರೆಮುಖ, ಕಾರ್ಕಳ ಮಾರ್ಗವಾಗಿ ಮಂಗಳೂರು ಸೇರಬಹುದು.
ಮತ್ತೊಂದು ಮಾರ್ಗ ಮಡಿಕೇರಿ, ಸಂಪಾಜೆ ಸುಳ್ಯ, ಪುತ್ತೂರು, ಬಿಸಿರೋಡ್​ ಮೂಲಕ ಮಂಗಳೂರು ತಲುಪಬಹುದಾಗಿದೆ.
ಚಾರ್ಮಾಡಿ ಘಾಟ್​​​ನಲ್ಲಿ ಮತ್ತೆ ಭೂ ಕುಸಿತ
ಚಾರ್ಮಾಡಿ ಘಾಟ್​​​ನಲ್ಲಿಂದು ಮತ್ತೆ ಭೂ ಕುಸಿತ ಸಂಭವಿಸಿದೆ. ಭೂಕುಸಿತದಿಂದಾಗಿ ಚಾರ್ಮಾಡಿ ಘಾಟ್​ ರೋಡ್​​ನ ತಡೆಗೋಡೆ ಕುಸಿತಗೊಂಡಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಮುಂಜಾಗ್ರತೆ ಕ್ರಮವಾಗಿ ಇಂದು ಮತ್ತು ನಾಳೆ ಘಾಟ್​​ ಮಾರ್ಗದ ರಸ್ತೆ ಬಂದ್​​ ಆಗಿತ್ತು. ಇಂದು ತಡೆಗೋಡೆ ಕುಸಿದ ಪರಿಣಾಮ ನಾಡಿದ್ದು ಸಹ ರಸ್ತೆ ಸಂಚಾರ ಬಂದ್​ ಮಾಡುವ ಸಾಧ್ಯತೆ ಇದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv