ಚನ್ನಪಟ್ಟಣ: ಯಾರನ್ನ ಮಣ್ಣುಮುಕ್ಕಿಸುತ್ತೋ ‘ಶತ್ರುವಿನ ಶತ್ರು ಮಿತ್ರ’ ಸಮರ?

ಶತ್ರುವಿನ ಶತ್ರು ಮಿತ್ರ ಅನ್ನೋದು ಬಹಳ ಪುರಾತನ ಸೂತ್ರ. ಇದೇ ಸೂತ್ರ ಚನ್ನಪಟ್ಟಣ ಚುನಾವಣಾ ಕಣದಲ್ಲಿ ಕಾಣತೊಡಗಿದೆ. ಒಬ್ಬ ಶತ್ರುವನ್ನ ರಾಜಕೀಯವಾಗಿ ಮುಗಿಸಲು ಮತ್ತೊಬ್ಬ ಶತ್ರು ಜೊತೆ ಕೈ ಜೋಡಿಸುವುದು, ಈ ಶತ್ರುವನ್ನ ಹೆಣೆಯಲು ಮಗದೊಬ್ಬ ಶತ್ರುವಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು. ರಾಮನಗರ ಜಿಲ್ಲೆಯ ರಾಜಕಾರಣದಲ್ಲಿ ಕಾಣಬರ್ತಿರೋ ಚಿತ್ರಣವಿದು.
ಕಳೆದ ಚುನಾವಣೆಯಲ್ಲಿ ಮಿತ್ರರಾಗಿದ್ದವರೇ ಈಗ ಶತ್ರುವಾಗಿದ್ದಾರೆ. ಅವರನ್ನೇ ಮುಗಿಸುವ ಸಲುವಾಗಿ ಮತ್ತೆರಡು ಶತ್ರುಗಳು ಖಡ್ಗ ಝಳಪಿಸಿದ್ದಾರೆ.
ಹಾಲಿ ಶಾಸಕರು ಯಾರು
ಚನ್ನಪಟ್ಟಣ ಯಾವುದೇ ರಾಜಕೀಯ ಪಕ್ಷದ ಭದ್ರಕೋಟೆ ಅನ್ನೋದಕ್ಕಿಂತಲೂ ಸಿ.ಪಿ. ಯೋಗೀಶ್ವರ್ ಕೋಟೆ ಅನ್ನೋದೇ ಸೂಕ್ತ. ಯಾಕಂದ್ರೆ ಕಳೆದೊಂದು ದಶಕದಿಂದಲೂ ಇಲ್ಲಿನ ಚುನಾವಣೆಯಲ್ಲಿ ಆರಿಸಿ ಬರ್ತಿರೋದು ಸಿ.ಪಿ. ಯೋಗೀಶ್ವರ್ ಅವರೇನೇ. ಅದರಲ್ಲೂ ಅವರು ಯಾವುದೋ ಒಂದು ಪಕ್ಷದಿಂದ ಆರಿಸಿ ಬರ್ತಿಲ್ಲ. ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಚುನಾಯಿತರಾಗ್ತಾ ಬಂದಿದ್ದಾರೆ. ಸದ್ಯ ಕ್ಷೇತ್ರದ ಹಾಲಿ ಶಾಸಕರು ಕೂಡಾ ಅವರೇನೇ.
ಈ ಬಾರಿ ಕಣದಲ್ಲಿರುವವರು ಯಾಱರು?
ಈಗಾಗಲೇ ನಿಗದಿಯಾಗಿದ್ದಂತೆ ಸಿ.ಪಿ. ಯೋಗೀಶ್ವರ್ ಅವರೇ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಯೋಗೀಶ್ವರ್ ಎದುರಿಗೆ ನಿಂತು ಗೆಲ್ಲಲು ಪ್ರಬಲ ಅಭ್ಯರ್ಥಿಗಳ ಕೊರತೆ ಎದುರಾಗುತ್ತಿತ್ತು. ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಯೋಗೀಶ್ವರ್‌ 80 ಸಾವಿರ ಮತಗಳನ್ನು ಪಡೆದು ವಿಜಯಿಯಾಗಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ ಅನಿತಾ ಕುಮಾರಸ್ವಾಮಿ ಕೂಡ ಯೋಗೀಶ್ವರ್‌ ಮುಂದೆ ಪರಾಭವಗೊಂಡಿದ್ದರು. ಇನ್ನು ಕಾಂಗ್ರೆಸ್ ಠೇವಣಿಯನ್ನೇ ಕಳಕೊಂಡಿತ್ತು. ಸಾಮಾನ್ಯವಾಗಿ ಚನ್ನಪಟ್ಟಣದಲ್ಲಿ ನೇರ ಸ್ಪರ್ಧೆ ಏರ್ಪಟ್ಟು ಯೋಗೀಶ್ವರ್ ಗೆದ್ದು ಬೀಗುತ್ತಿದ್ದರು. ಆದ್ರೆ ಈ ಬಾರಿ ಚಿತ್ರಣ ಬದಲಾಗಿದೆ. ಯಾಕಂದ್ರೆ ಜೆಡಿಎಸ್‌ನಿಂದ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರೇ ಕಣಕ್ಕಿಳಿದಿದ್ದಾರೆ. ಇನ್ನೊಂದ್ಕಡೆ ಕಾಂಗ್ರೆಸ್‌ ಕೂಡಾ ಯೋಗೀಶ್ವರ್ ಅವರನ್ನ ಹಣಿಯಲೆಂದೇ ತಂತ್ರ ರೂಪಿಸಿರೋದು ಗೋಚರಿಸ್ತಾ ಇದ್ದು, ಸಚಿವ ಹೆಚ್.ಎಂ. ರೇವಣ್ಣರನ್ನ ಅಖಾಡಕ್ಕಿಳಿಸಿದೆ. ಹೀಗಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಯೋಗೀಶ್ವರ್‌ಗೆ ಕ್ಷೇತ್ರ ಉಳಿಸಿಕೊಳ್ಳೋದು ಸುಲಭವಾಗಿ ಕಾಣಿಸ್ತಿಲ್ಲ.
ಕ್ಷೇತ್ರದಲ್ಲಿ ಒಟ್ಟು 2,15,214 ಮತದಾರರಿದ್ದಾರೆ. ಈ ಪೈಕಿ 1,05,928ರಷ್ಟಿರುವ ಒಕ್ಕಲಿಗ ಮತದಾರರೇ ನಿರ್ಣಾಯಕರು. ಉಳಿದಂತೆ ಎಸ್‌ಸಿ /ಎಸ್‌ಟಿ 39,259, ಮುಸ್ಲಿಮರು 24,991, ಲಿಂಗಾಯಿತರು 9435, ಕುರುಬರು 7136, ತಿಗಳರು 8232, ಬೆಸ್ತರು 9792, ಇತರರು 10,441ರಷ್ಟಿದ್ದಾರೆ.
ರಾಜಕೀಯದ ಕೇಂದ್ರಬಿಂಧುವಾದ ಇಗ್ಗಲೂರು ಜಲಾಶಯ
ಚನ್ನಪಟ್ಟಣ ಹೆಚ್ಚಾಗಿ ಕೃಷಿ ಹಾಗೂ ಹೈನುಗಾರಿಕೆಯನ್ನೇ ಅವಲಂಭಿಸಿರುವ ಭಾಗ. ರೇಷ್ಮೆ, ತೆಂಗು, ರಾಗಿ, ಜೋಳ, ಹೈನುಗಾರಿಕೆ ಜೊತೆಗೆ ಗುಡಿಕೈಗಾರಿಕೆಯೂ ಇಲ್ಲಿನ ಮೂಲ ಕಸುಬಾಗಿದೆ. ಕೃಷಿ ಅವಲಂಭಿತ ಪ್ರದೇಶವಾಗಿರೋದ್ರಿಂದ ನೀರಾವರಿಗೆ ಹೆಚ್ಚು ಮಹತ್ವವಿದೆ. ಹೀಗಾಗಿಯೇ ನೀರಾವರಿ ಕೆಲಸಗಳೇ ಇಲ್ಲಿನ ರಾಜಕಾರಣವನ್ನ ಇಷ್ಟೂ ವರ್ಷಗಳಿಂದ ನಿರ್ಧರಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲೂ ಇಗ್ಗಲೂರು ಜಲಾಶಯ ಹೆಚ್ಚು ಚರ್ಚೆಯಾಗ್ತಿದೆ.

ಇಗ್ಗಲೂರು ಜಲಾಶಯ ಕಾಮಗಾರಿಗೆ ಪೂರ್ಣರೂಪ ಕೊಟ್ಟು ಅಲ್ಲಿ ನೀರು ಸಂಗ್ರಹವಾಗುವಂತೆ ಮಾಡಿದ್ದು ಎಚ್‌.ಡಿ. ದೇವೇಗೌಡರು. ಹೀಗಾಗಿ ಈ ಕೆಲಸದ ಶ್ರೇಯಸ್ಸು ನಮಗೇ ಸಲ್ಲಬೇಕು- ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ

 

ದೇವೇಗೌಡರ ಕಾಲದ ಯೋಜನೆಯಾದರೂ ಕಾಲಕಾಲಕ್ಕೆ ನಮ್ಮ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದ ಕಾರಣವೇ ಕ್ಷೇತ್ರದ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗಿರುವುದು- ಹೆಚ್. ಎಂ ರೇವಣ್ಣ, ಕಾಂಗ್ರೆಸ್ ಅಭ್ಯರ್ಥಿ

 

ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಿ, ಅದಕ್ಕೆ ಬೆವರು ಹರಿಸಿದ್ದು ನಾನು. ಹೀಗಾಗಿ ಚನ್ನಪಟ್ಟಣದಲ್ಲಿ ಕೈಗೊಳ್ಳಲಾಗಿರುವ ನೀರಾವರಿ ಯೋಜನೆಗಳು ನನ್ನ ಸಾಧನೆ- ಸಿ.ಪಿ ಯೋಗೇಶ್ವರ್, ಬಿಜೆಪಿ ಅಭ್ಯರ್ಥಿ

ಈ ಬಾರಿಯೂ ಗೆದ್ದು ಬೀಗುತ್ತಾರಾ ಚನ್ನಪಟ್ಟಣದ ಭಗೀರಥ?
ಸಿ.ಪಿ. ಯೋಗೀಶ್ವರ್ ಅವರಿಗೆ ಈ ಚುನಾವಣೆ ಒಂದು ರೀತಿಯಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದ ಯೋಗೀಶ್ವರ್‌, 2014ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಆದ್ರೆ ಇದೇ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ವರಿಷ್ಠರ ಬಗ್ಗೆ ಬೇಸತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. ಸದ್ಯ ಬಿಜೆಪಿಯಿಂದಲೇ ಯೋಗೀಶ್ವರ್‌ ಚುನಾವಣೆ ಎದುರಿಸುತ್ತಿದ್ದಾರೆ. ಬಿಜೆಪಿಗೆ ನೆಲೆಯೇ ಇಲ್ಲದ ರಾಮನಗರದಲ್ಲೀಗ ಕಮಲ ಅರಳಿಸುವ ಸವಾಲು ಯೋಗೀಶ್ವರ್‌ ಮುಂದಿದೆ.
ಎರಡನೇ ಕ್ಷೇತ್ರವಾಗಿ ಕಣಕ್ಕಿಳಿದಿರೋದು ಹೆಚ್‌ಡಿಕೆಗೆ ಫಲ ನೀಡುತ್ತಾ?
ಈ ಬಾರಿಯ ಚುನಾವಣೆಯಲ್ಲಿ ಗಮನಸೆಳೆದಿರೋದು ಅಂದ್ರೆ ಮೂರೂ ಪಕ್ಷಗಳು ತಲಾ ಒಬ್ಬೊಬ್ಬರು ನಾಯಕರನ್ನ ಅವಳಿ ಕ್ಷೇತ್ರದಲ್ಲಿ ಕಣಕ್ಕಿಳಿಸಿರೋದು.

ಈ ಪೈಕಿ ಕುಮಾರಸ್ವಾಮಿಯವರು ಚನ್ನಪಟ್ಟಣದಲ್ಲೂ ಸ್ಪರ್ಧಿಸಿದ್ದಾರೆ. ಜೊತೆಗೆ ರಾಮನಗರದಲ್ಲೂ ಅಖಾಡದಲ್ಲಿದ್ದಾರೆ. ಇದೆಲ್ಲಾ ಡಿ.ಕೆ. ಶಿವಕುಮಾರ್‌ ತಂತ್ರ ಅಂತಾ ಸಿ.ಪಿ. ಯೋಗೀಶ್ವರ್‌ ಆರೋಪಿಸ್ತಾ ಇದ್ದಾರೆ. ತನ್ನನ್ನ ಮಣಿಸಲೆಂದೇ ಡಿ.ಕೆ. ಶಿವಕುಮಾರ್‌, ಕುಮಾರಸ್ವಾಮಿ ಕೈಜೋಡಿಸಿದ್ದಾರೆ ಅಂತಾ ಆಪಾದಿಸ್ತಾ ಇದ್ದಾರೆ. ಒಟ್ನಲ್ಲಿ ಈ ಸೂತ್ರ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೋ ಮತದಾರರೇ ತೀರ್ಮಾನಿಸಬೇಕಿದೆ.
ಪ್ರತಿಷ್ಠೆಯ ಕಣದಲ್ಲಿ ಫಲತೆಗೆಯಬಲ್ಲರಾ ಹೆಚ್‌.ಎಂ. ರೇವಣ್ಣ?
ಕಾಂಗ್ರೆಸ್‌ ಅನಿರೀಕ್ಷಿತವೆಂಬಂತೆ ಹೆಚ್.ಎಂ. ರೇವಣ್ಣರನ್ನ ಚನ್ನಪಟ್ಟಣದಲ್ಲಿ ಅಖಾಡಕ್ಕಿಳಿಸಿರೋದು ವಿಶೇಷ.

ಈ ಮೊದಲೇ ಸಿ.ಪಿ. ಯೋಗೀಶ್ವರ್ ಎದುರಿಗೆ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಅನ್ನೋದು ನಿರ್ಧಾರವಾಗಿತ್ತು. ಆದ್ರೆ ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಅನ್ನೋದು ಕುತೂಹಲವಾಗಿಯೇ ಉಳಿದಿತ್ತು. ಕಡೆಗೆ ಸಚಿವ ರೇವಣ್ಣರನ್ನ ಚನ್ನಪಟ್ಟಣಕ್ಕೆ ಅಭ್ಯರ್ಥಿ ಮಾಡಿ ಕಾಂಗ್ರೆಸ್‌ ಸಂಚಲನ ಮೂಡಿಸಿದೆ. ನೇರ ಸ್ಪರ್ಧೆ ಏರ್ಪಡಬಹುದಾಗಿದ್ದ ಕ್ಷೇತ್ರದಲ್ಲೀಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

 

ವಿಶೇಷ ವರದಿ: ಹರೀಶ್‌