ಹೆಸರಿಗೆ ಜನ ಸೇವಾ ಸ್ಪಂದನ ಕೇಂದ್ರ, ಆದ್ರೆ ಇಲ್ಲಿ ಜನರಿಗಿಲ್ಲ ಸ್ಪಂದನೆ..!

ರಾಯಚೂರು: ನಗರದ ಜನ ಸೇವಾ ಸ್ಪಂದನ ಕೇಂದ್ರಕ್ಕೆ ಬರುವ ಜನರು ಇಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ಡೊಂಟ್ ಕೇರ್ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಅಂತಾ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಆಧಾರ್ ನೋಂದಣಿ, ಆಶ್ರಯ ಮನೆಗಳು, ಬಸವ ವಸತಿ, ಎಸ್​ಸಿ, ಎಸ್​ಟಿ ಯವರಿಗೆ ಮನೆಗಳ ಲೋನ್​ಗೆ ಅರ್ಜಿ ಸಲ್ಲಿಸಲು, ಲೋನ್ ಮಾಡಿಸಿಕೊಳ್ಳಲು ನಿತ್ಯ ನೂರಾರು ಜನರು ಸ್ಪಂದನಾ ಕೇಂದ್ರಕ್ಕೆ ಆಗಮಿಸುತ್ತಾರೆ. ಆದ್ರೆ ಈ ಕೇಂದ್ರದಲ್ಲಿ ಬರುವ ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲದೆ ಗಂಟೆ ಗಟ್ಟಲೆ ನಿಂತು ಕೊಂಡೇ ಕೆಲಸ ಮಾಡಿಸಿಕೊಳ್ಳಬೇಕು. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬರುವ ಮಹಿಳೆಯರಿಗೆ ಇನ್ನಿಲ್ಲದ ತೊಂದರೆ ಆಗುತ್ತಿದೆ. ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಿಲ್ಲ.
ಸ್ಪಂದನ ಕೇಂದ್ರದಲ್ಲಿ ಸ್ಥಾಳಾವಕಾಶ ಇಲ್ಲದೆ ಜನರು ಮೆಟ್ಟಿಲುಗಳ ಮೇಲೆ ಕುಳಿತುಕೊಂಡು ತಮ್ಮ ಕೆಲಸ ಮಾಡಿಸಿಕೊಂಡು ಹೋಗುವಂತಾಗಿದೆ. ಇನ್ನೂ ಜನ ಸ್ಪಂದನ ಕೇಂದ್ರದಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿದ್ದು, ಎಲ್ಲೆಂದರಲ್ಲಿ ಕಸ ಎಸೆಯಲಾಗಿದೆ, ಗೋಡೆಗಳ ಮೇಲೆ ಗುಟಖಾ ಅಗಿದು ಉಗುಳಲಾಗಿದ್ದು, ಸ್ಪಂದನ ಕೇಂದ್ರದಲ್ಲಿ ದುರ್ನಾತದಿಂದ ಕೂಡಿದೆ. ಕೇಂದ್ರ ಸ್ವಚ್ಚವಾಗಿಡಬೇಕಾಗಿದ್ದ ಸ್ಪಂದನಾ ಕೇಂದ್ರ ಸಿಬ್ಬಂದಿಯೇ ಗುಟಕಾ ತಿಂದು ಎಲ್ಲೆಂದರಲ್ಲಿ ಉಗುಳುತ್ತಿದ್ದಾರೆ. ಇದು ಜನಸೇವಾ ಸ್ಪಂದನಾ ಕೇಂದ್ರದ ಅವ್ಯವಸ್ಥೆ ಆದ್ರೆ, ಇಲ್ಲಿಗೆ ಬರುವ ಜನರಿಗೆ ಸಿಬ್ಬಂದಿ ಬೇಗನೆ ಕೆಲಸ ಮಾಡಿಕೊಡದೇ ಲಂಚಕ್ಕಾಗಿ ಸತಾಯಿಸುತ್ತಿದ್ದಾರೆಂದು ಕೇಂದ್ರಕ್ಕೆ ಬರುವ ಜನರು ಆರೋಪಿಸುತ್ತಿದ್ದಾರೆ. ಒಟ್ಟಾರೆಯಾಗಿ ಜನಸೇವಾ ಸ್ಪಂದನ ಕೇಂದ್ರಕ್ಕೆ ಬರುವ ಜನರು ಅಧಿಕಾರಿಗಳು, ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದು, ಸ್ಪಂದನ ಕೇಂದ್ರದಲ್ಲಿ ಸಾರ್ವಜನಿಕರಿಗೆ ಸ್ಪಂದನೆಯೇ ಸಿಗದಂತಾಗಿದೆ. ನಗರ ಸಭೆ ಆಯುಕ್ತರು, ಜನಪ್ರತಿನಿಧಿಗಳು ಸ್ಪಂದನಾ ಕೇಂದ್ರದತ್ತ ಗಮನ ಹರಿಸಬೇಕಾಗಿದೆ.

ನಿಮ್ಮ ಸಲಹೆ,ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv