ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲ: ಐವಾನ್​ ಡಿಸೋಜ

ಶಿವಮೊಗ್ಗ: ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಈಡೇರಿಲ್ಲ. ಆದರೆ ರಾಜ್ಯ ಸರ್ಕಾರ ಕೌಶಲ್ಯ ಅಭಿಪ್ರಾಯ ನಿಗಮ ಸ್ಥಾಪಿಸುವ ಮೂಲಕ ಉದ್ಯೋಗಕ್ಕೆ ಪೂರಕವಾದ ಕ್ರಮ ಕೈಗೊಂಡಿದೆ ಎಂದು ಕೆಪಿಸಿಸಿ ವಕ್ತಾರ ಐವಾನ್​ ಡಿಸೋಜಾ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನ ಪರಿಷತ್​ನಲ್ಲಿ ಶಿಕ್ಷಕರು ಮತ್ತು ಪದವಿಧರ ಕ್ಷೇತ್ರದ 18 ಜನಪ್ರತಿನಿಧಿಗಳು ಇದ್ದಾರೆ. ನಾವು ಅವರೊಂದಿಗೆ ಸೇರಿ ಶಿಕ್ಷಕರ ಮತ್ತು ಪದವಿಧರರ ಸಮಸ್ಯೆಗೆ ದನಿಯಾಗಲಿದ್ದೇವೆ ಎಂದರು.

ನಮಗೆ ಮತ ಕೇಳಲು ನೈತಿಕತೆ ಇದೆ‌
ಶಿಕ್ಷಣ ಮತ್ತು ಪದವಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಾಕಷ್ಟು ಕೆಲಸ ಮಾಡಿದೆ. 10 ಸಾವಿರಕ್ಕೂ ಹೆಚ್ಚು ಶಿಕ್ಷಕರು ಹಾಗೂ 5 ಸಾವಿರ ಪಿಯು ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ. ಅದೇ ರೀತಿ ಪ್ರಾಥಮಿಕ ಶಾಲೆಯ ಶಿಕ್ಷರಿಗೆ ಹಿರಿಯ ಪ್ರಾಥಮಿಕ ಶಾಲೆಗೆ ಹಾಗೂ ಪಿಯು ಉಪನ್ಯಾಸಕರಿಗೆ ಪದವಿ ಉಪನ್ಯಾಸಕರಾಗಿ ಬಡ್ತಿ ನೀಡಿದೆ. ಹಾಗಾಗಿ ನಮಗೆ ಮತ ಕೇಳಲು ನೈತಿಕತೆ ಇದೆ‌. ನೈರುತ್ಯ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ. ಇನ್ನು ಬಿಜೆಪಿಯು ವಾಮಮಾರ್ಗದ ಮೂಲಕ ಶಿಕ್ಷಕ ಮತ್ತು ಪದವೀಧರರ ದಾರಿ ತಪ್ಪಿಸಲು ಯತ್ನಿಸುತ್ತಿದೆ. ಈ ಬಗ್ಗೆ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಬೇಕು ಎಂದು ಚುನಾವಣಾಧಿಕಾರಿಗೆ ಮನವಿ ಸಲ್ಲಿಸುತ್ತೇನೆ ಎಂದು ಡಿಸೋಜಾ ಹೇಳಿದರು.
ಕಾಂಗ್ರೆಸ್​ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ಸರ್ಕಾರಿ ನೌಕರರಿಗೆ ಮಾರಕವಾದ ಎನ್​ಪಿಎಸ್​ನ್ನು ಬಿಜೆಪಿ ಆಡಳಿತದಲ್ಲಿ ಜಾರಿಗೊಳಿಸಿದೆ. ಆದರೆ ಸಂಘ, ಸಂಸ್ಥೆಗಳ ಒತ್ತಾಯದ ಮೇರೆಗೆ ಕಾಂಗ್ರೆಸ್​ ಸರ್ಕಾರದ ಕೊನೆಯಲ್ಲಿ ಎನ್​ಪಿಎಸ್ ರದ್ಧತಿಗೆ ಕ್ರಮ ತೆಗೆದುಕೊಂಡಿತ್ತು. ಸಮಯದ ವಿಳಂಬದಿಂದ ರದ್ದು ಮಾಡಲು ಆಗಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ವೇತನ ಆಯೋಗದ ಶಿಫಾರಸನ್ನು ಜಾರಿಗೊಳಿಸಿದೆ. ನಾನು ಶಿಕ್ಷಕನಾಗಿ ಕೆಲಸ ಮಾಡಿ ಶಿಕ್ಷಕರ ಸಮಸ್ಯೆಗಳ ಅರಿವಿದೆ. ಹಾಗಾಗಿ ನನಗೆ ಮತ ನೀಡುವ ಮೂಲಕ ಶಿಕ್ಷಕರ ದನಿಯಾಗಲು ಅವಕಾಶ ನೀಡಬೇಕೆಂದು ಮಂಜುನಾಥ್​ ಮನವಿ ಮಾಡಿಕೊಂಡರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv