ನ್ಯಾ.ವಿಶ್ವನಾಥ್ ಶೆಟ್ಟಿ ಚಾಕು ಇರಿತ ಕೇಸ್‌; ಆರೋಪಿಗೆ ಮಂಪರು ಪರೀಕ್ಷೆ

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್​ ಶೆಟ್ಟಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಆರೋಪಿ ತೇಜ್​ರಾಜ್​ ಶರ್ಮಾನನ್ನು ಮತ್ತಷ್ಟು ತನಿಖೆಗೆ ಒಳಪಡಿಸಿದ್ದು, ಆರೋಪಿಗೆ ಮಂಪರು ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಸಿಸಿಬಿ ಪೊಲೀಸರು ಸಲ್ಲಿಸಿದ್ದ ಚಾರ್ಜ್​ಶೀಟ್​ ಕಂಡು ಕೆಂಡಾಮಂಡಲರಾಗಿದ್ದ ನ್ಯಾಯಮೂರ್ತಿ ವಿಶ್ವನಾಥ್​ಶೆಟ್ಟಿ, ಆರೋಪಿ ಹೇಳಿದ್ದನ್ನು ಮಾತ್ರ ದಾಖಲಿಸಿದ್ದೀರಿ, ಆತನ ಹಿಂದಿರುವ ದುಷ್ಟಶಕ್ತಿ ಯಾರೆಂದು ಹುಡುಕಿ ಎಂದಿದ್ದರು. ಉದ್ದೇಶಪೂರ್ವಕವಾಗಿ ಆರೋಪಿ ಮೂಲಕ ಹಲ್ಲೆ ನಡೆಸಿದ್ದಾರೆ. ಇದರ ಹಿಂದೆ ದುಷ್ಟ ಶಕ್ತಿಗಳ ಕೈವಾಡ ಇದೆ ಎಂಬ ವಿಶ್ವನಾಥ್​ ಶೆಟ್ಟಿ ಅವರ ಸೂಚನೆ ಮೇರೆಗೆ ಮರುತನಿಖೆಗೆ ಇಳಿದಿರುವ ಸಿಸಿಬಿ ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ತನ್ನ ಹಿಂದಿನ ಶಕ್ತಿಯ ಬಗ್ಗೆ ಬಾಯ್ಬಿಡದ ತೇಜ್​ರಾಜ್​ ಶರ್ಮಾರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಬಾಯ್ಬಿಡಿಸಲು ಮುಂದಾಗಿದ್ದಾರೆ. ಕೋರ್ಟ್ ಅನುಮತಿ ಪಡೆದು ಡಿಸಿಪಿ ಜೀನೇಂದ್ರ ಖಣಗಾವಿ ನೇತೃತ್ವದಲ್ಲಿ ಅಧಿಕಾರಿಗಳು ಅಹಮದಾಬಾದ್​ಗೆ ತೆರಳಿದ್ದಾರೆ. ನಾಳೆ ಅಹಮದಾಬಾದ್​ನಲ್ಲಿ ತೇಜ್​ರಾಜ್​ ಶರ್ಮಾಗೆ ಮಾಡುವ ಮಂಪರು ಪರೀಕ್ಷೆಯ ನಂತರ ಹಲ್ಲೆಯ ಹಿಂದಿನ ಶಕ್ತಿ ಬಗ್ಗೆ ಸ್ಪಷ್ಟ ಚಿತ್ರಣ ತಿಳಿದು ಬರುವ ಸಾಧ್ಯತೆಯಿದೆ.