ಇಂದು ರಾತ್ರಿಯಿಂದಲೇ ಹಾರುವುದಿಲ್ಲ ಜೆಟ್​ ಏರ್​ವೇಸ್​ ವಿಮಾನಗಳು

ನವದೆಹಲಿ: ಜೆಟ್​ ಏರ್​ವೇಸ್​ ವಿಮಾನ ಸಂಸ್ಥೆಗೆ ತುರ್ತಾಗಿ ಬೇಕಿದ್ದ ₹ 400 ಕೋಟಿ ಸಾಲ ಲಭ್ಯವಾಗದೇ ಇರುವ ಕಾರಣ, ಇಂದು ರಾತ್ರಿಯಿಂದಲೇ ಜೆಟ್​ ಏರ್​ವೇಸ್​ ವಿಮಾನಗಳು ಹಾರಾಡುವುದಿಲ್ಲ, ಆದ್ರೆ ಇಂದು ರಾತ್ರಿ 10.20ಕ್ಕೆ ಅಮೃತಸರದಿಂದ ಮುಂಬೈಗೆ ಕೊನೆಯ ಜೆಟ್​ ಏರ್​ವೇಸ್ ವಿಮಾನ ಹಾರಲಿದೆ.

ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾದ ಜೆಟ್​ ಏರ್​ವೇಸ್ ಸಂಸ್ಥೆ, ದೈನಂದಿನ ಕಾರ್ಯಾಚರಣೆಗೆ ತಕ್ಷಣಕ್ಕೆ ಭಾರೀ ಮೊತ್ತದ ಹಣಕಾಸು ನೆರವು ಬೇಕೆಂದು ಮನವಿ ಮಾಡಿಕೊಮಡಿತ್ತು. ಆದ್ರೆ ಕೇಂದ್ರ ಸರ್ಕಾರ ಸೇರಿದಂತೆ, ಯಾವುದೇ ಸರ್ಕಾರಿ ಬ್ಯಾಂಕುಗಳಾಗಲಿ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳು ಜೆಟ್​ ಏರ್​ವೇಸ್ ಸಂಸ್ಥೆಗೆ ನೆರವು ನೀಡುವುದಕ್ಕೆ ಹಿಂದೇಟು ಹಾಕಿದವು. ಹಾಗಾಗಿ ಇಂದು ರಾತ್ರಿಯಿಂದಲೇ ತನ್ನ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಇರುವುದಿಲ್ಲ ಎಂದು ಸಂಸ್ಥೆ ಪ್ರಕಟಿಸಿದೆ. ಹಣಕಾಸು ಸಂಸ್ಥೆಗಳಿಂದ ಜೆಟ್​ ಏರ್​ವೇಸ್ ಸಂಸ್ಥೆ ಒಟ್ಟಾರೆಯಾಗಿ ₹ 1,500 ಕೋಟಿ ಸಾಲ ಬೇಡಿತ್ತು.
ನರೇಶ್​ ಗೋಯಲ್​ ಮಾಲೀಕತ್ವದ ಜೆಟ್​ ಏರ್​ವೇಸ್ ಸಂಸ್ಥೆಗೆ ಹಣಕಾಸು ನೆರವು ನೀಡುವ ಸಂಬಂಧ ನಾಗರಿಕ ವಿಮಾನಯಾನ ಸೆಕ್ರೆಟರಿ ಪ್ರದೀಪ್​ ಸಿಂಗ್​ ಕರೋಲಾ ಇತ್ತೀಚೆಗೆ ಅನೇಕ ಸುತ್ತಿನ ಮಾತುಕತೆ ನಡೆಸಿದ್ದರು. ಒಂದು ವೇಳೆ ₹ 1,500 ಕೋಟಿ ಸಾಲಸೋಲ ನೀಡಿದರೂ ಅದು ಮತ್ತೆ ಸುಸ್ಥಿತಿಗೆ ಬರುವುದು ಕಷ್ಟವಾಗಿತ್ತು. ವಾಸ್ತವವಾಗಿ ಸಂಸ್ಥೆಗೆ 10 ಸಾವಿರ ಕೋಟಿ ರೂ ಸಾಲದ ಜರೂರತ್ತು ಇದೆ. ಇದರಿಂದ ಸುಮಾರು 16 ಸಾವಿರ ಉದ್ಯೋಗಿಗಳು ಕೆಲಸವಿಲ್ಲದೆ ಈಗ ಅತಂತ್ರವಾಗಿದ್ದಾರೆ.