ಪಿಎಸ್​ಐಗೆ ಆವಾಜ್​, ಶಾಸಕ ಮತ್ತಿಮೂಡ್‍ ಬೆಂಬಲಿಗನ ವಿರುದ್ಧ ಕೇಸ್‍..!

ಕಲಬುರ್ಗಿ: ನರೋಣಾ ಠಾಣೆಯ ಪಿಎಸ್‍ಐಗೆ ಆವಾಜ್‍ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಬೆಂಬಲಿಗ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಾಗಿದೆ. ನರೋಣಾ ಠಾಣೆ ಪಿಎಸ್‍ಐ ಗಜಾನನ್ ನಾಯಕ್‍ ಸ್ವಯಂಪ್ರೇರಿತವಾಗಿ ದೂರು ನೀಡಿದ್ದಾರೆ. ದೂರಿನನ್ವಯ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ ಆರೋಪದಡಿ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಉಪಸ್ಥಿತಿಯಲ್ಲಿಯೇ ಬೆಂಬಲಿಗ ಶರಣು ಸಲಗರ್, ನರೋಣಾ ಠಾಣೆಯ ಪಿಎಸ್‍ಐ ಗಜಾನನ್ ನಾಯಕ್‍ಗೆ ಆವಾಜ್ ಹಾಕಿದ್ದರು. ಈ ವಿಡಿಯೋ ಅದಾಗ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿತ್ತು. ಈ ಪ್ರಕರಣದ ಕುರಿತು ಕಲಬುರ್ಗಿಯಲ್ಲಿ ಪ್ರತಿಕ್ರಿಯಿಸಿರುವ ಎಸ್‍ಪಿ ಎನ್. ಶಶಿಕುಮಾರ್, “ಪ್ರಾಥಮಿಕವಾಗಿ ಪಿಎಸ್‍ಐ ನಮ್ಮ ಬಳಿ ಏನು ಹೇಳಿರಲಿಲ್ಲ. ಆ ನಂತರದಲ್ಲಿ ವಿಡಿಯೋ ಬಹಿರಂಗವಾದ ಬಳಿಕ ಪಿಎಸ್‍ಐ ಜೊತೆ ಮಾತನಾಡಿದಾಗ ಘಟನೆ ಕುರಿತು ತಿಳಿಸಿದರು.

ಆದ್ರೆ ಈಗ ಅವರೇ ಸ್ವಯಂಪ್ರೇರಿತವಾಗಿ ಶರಣು ಸಲಗರ್​ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು ಮುಂದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ನರೋಣಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 353ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸದ್ಯ ಆರೋಪಿ ಇಲ್ಲಿಲ್ಲ, ಬೆಂಗಳೂರಿನಲ್ಲಿದ್ದಾನೆಂಬ ಮಾಹಿತಿ ಇದೆ. ಶರಣು ಸಲಗರ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಯಾರೇ ಆಗಲಿ ಈ ರೀತಿ ಪೊಲೀಸ್‍ ಠಾಣೆಗೇ ಹೋಗಿ ಅನುಚಿತವಾಗಿ ವರ್ತಿಸುವುದು ತಪ್ಪು. ಸದ್ಯ ಶರಣು ಸಲಗರ್ ವಿರುದ್ಧ ಪಿಎಸ್‍ಐ ದೂರು ನೀಡಿದ್ದಾರೆ. ಈ ಆರೊಪಿಯಷ್ಟೇ ಅಲ್ಲ, ಬೇರೆ ಯಾರಾದರೂ ಸಹ ಕಾನೂನುಬಾಹಿರವಾಗಿ ನಡೆದುಕೊಂಡಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಆಳಂದ ಡಿವೈಎಸ್‍ಪಿಗೆ ಸೂಚನೆ ನೀಡಿದ್ದೇನೆ ಅಂತಾ ಎಸ್‍ಪಿ ಎನ್. ಶಶಿಕುಮಾರ್ ತಿಳಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv