ವಿಂಟೇಜ್ ಸರದಾರನ ದುರಂತ ಅಂತ್ಯ..!

ಕೊಡಗು: ಅಲ್ಲಿರುವ ಶೆಡ್‍ನಲ್ಲಿ ನೂರಕ್ಕೂ ಅಧಿಕ ಜೀಪು ಕಾರುಗಳಿವೆ. ಅಂತಿಂಥ ಕಾರುಗಳಲ್ಲ! ಬಲು ಅಪರೂಪದ ವಿಂಟೇಜ್ ವಾಹನಗಳವು. ಆದರಿಂದು ನಡೆದ ಅನಿರೀಕ್ಷಿತ ಘಟನೆ ಅವುಗಳು ತಮ್ಮ ಒಡೆಯನನ್ನು ಕಳೆದುಕೊಳ್ಳುವಂತೆ ಮಾಡಿದೆ.
ಪಿ.ಸಿ. ಮಹಮ್ಮದ್ ಕುಟ್ಟಿ ಹಾಜಿ. ಕೊಡಗಿನಲ್ಲಿ ಈ ಹೆಸರು ಕೇಳಿದಾಕ್ಷಣ ಕಣ್ಣಮುಂದೆ ಬರೋದು ಬಲು ಅಪರೂಪದ ವಿಂಟೇಜ್ ಕಾರುಗಳು. ವಿಂಟೇಜ್ ಮಾತುಗಳಿಂದಲೇ ಕೊಡಗು ಮಾತ್ರವಲ್ಲದೆ ರಾಜ್ಯ, ಹೊರರಾಜ್ಯಗಳಲ್ಲಿ ಹೆಸರಾದವರು ಕುಟ್ಟಿ ಹಾಜಿ. ಹಳೆಯ ವಾಹನಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಹಾಜಿ, ತಮ್ಮ ಬತ್ತಳಿಕೆಯಲ್ಲಿ ನೂರಕ್ಕೂ ಅಧಿಕ ಹಳೆಯ ಜೀಪು, ಮಾತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಪ್ರತಿನಿತ್ಯ ಅವುಗಳ ಬಗ್ಗೆ ಕಾಳಜಿ ತೋರುತ್ತಿದ್ದುದ್ದರಿಂದ ಅಲ್ಲಿರುವ ಎಲ್ಲಾ ವಾಹನಗಳು ಇಂದಿಗೂ ಕೂಡಾ ರನ್ನಿಂಗ್ ಕಂಡಿಷನ್ನಲ್ಲಿವೆ. ಆದ್ರೆ ಆ ಅಮೂಲ್ಯ ವಾಹನಗಳು ಇಂದು ತಮ್ಮ ಸ್ನೇಹಿತನಂತಿದ್ದ ಮಾಲೀಕ 65 ವರ್ಷ ಪ್ರಾಯದ ಅಹಮ್ಮದ್ ಕುಟ್ಟಿ ಹಾಜಿಯವರನ್ನು ಕಳೆದುಕೊಂಡಿವೆ.

 

ಕಾರುಗಳ ಸಂಗ್ರಹದ ಜತೆಗೆ ಕೃಷಿಯಲ್ಲಿ ಹಾಜಿ ತೊಡಗಿಕೊಂಡಿದ್ದರು. ಕಳೆದೆರೆಡು ದಿನದಿಂದ ಜಿಲ್ಲೆಯಲ್ಲಿ ಭಾರಿ ಗಾಳಿಮಳೆಯಾಗುತ್ತಿದ್ದು, ಮಗನೊಂದಿಗೆ ತೋಟ ನೋಡೋದಕ್ಕೆ ಅಂತ ತೆರಳಿದ್ದಾರೆ. ಅಷ್ಟರಲ್ಲಾಗಲೆ ವಿಧಿ ಅವರಿಗಾಗಿ ಕಾದು ಕುಳಿತಿದ್ದ ಅನ್ಸುತ್ತೆ. ಪಕ್ಕದ ತೋಟದಲ್ಲಿದ್ದ ಮರದ ಮೇಲಿಂದ ಕೊಂಬೆಯೊಂದು ಅವರ ಮೇಲೆ ಬಿದ್ದಿದೆ. ತಲೆಗೆ ತೀವ್ರ ಪೆಟ್ಟಾಗಿ ಗಂಭೀರ ಗಾಯಗೊಂಡಿದ್ದ ಅವರನ್ನು ಮಗ ಅಶ್ರಫ್ ತಕ್ಷಣ ಸಿದ್ದಾಪುರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಅಷ್ಟರಲ್ಲಾಗಲೆ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಮೂಲತಃ ಕೇರಳ ರಾಜ್ಯದವರಾದ ಹಾಜಿ, ಕಳೆದ ಹಲವು ದಶಕಗಳಿಂದ ಕೊಡಗಿನಲ್ಲಿ ನೆಲೆಸಿದ್ದರು. ವಿಂಟೇಜ್ ಕಾರುಗಳ ಮೂಲಕ ಗಮನಸೆಳೆದಿದ್ದ ಅವರು, ಅವುಗಳನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರ ವೀಕ್ಷಣೆಗೂ ಅನುವು ಮಾಡಿಕೊಟ್ಟಿದ್ದರು. ಅವುಗಳನ್ನು ನೋಡೋದಕ್ಕೆಂದೇ ಪ್ರತಿನಿತ್ಯ ನೂರಾರು ಪ್ರವಾಸಿಗರು ಬರುತ್ತಿದ್ದರು.
ಇಹಲೋಕ ತ್ಯಜಿಸಿರುವ ಅಹಮ್ಮದ್ ಕುಟ್ಟಿ ಹಾಜಿ ಪುತ್ರ ಅಶ್ರಫ್ ಹಾಗೂ ತನ್ನ ಪ್ರೀತಿಯ ವಿಂಟೇಜ್ ಕೂಸುಗಳನ್ನು ಅಗಲಿದ್ದಾರೆ. ಅಪಾರ ಸಂಖ್ಯೆಯ ಹಿತೈಷಿಗಳು ಕಂಬನಿ ಮಿಡಿದಿದ್ದಾರೆ. ಶೆಡ್‍ನಲ್ಲಿರುವ ಕಾರು-ಜೀಪುಗಳು ಕೂಡಾ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv