ಬೈಕ್​ಗೆ ಕಾರು ಡಿಕ್ಕಿ: ಮಹಿಳೆ ಸಾವು, ಸ್ಥಳದಲ್ಲಿ ಉದ್ವಿಗ್ನ

ಮೈಸೂರು: ಇನ್ನೋವಾ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್​ನಲ್ಲಿದ್ದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ಘಟನೆ ನಗರದ ನಂಜನಗೂಡು ರಸ್ತೆಯ ಎರ್​ಪೋರ್ಟ್ ಬಳಿ ಸಂಭವಿಸಿದೆ.

ಊಟಿ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು, ಬೈಕ್​ಗೆ ಡಿಕ್ಕಿಯಾಗಿದೆ. ಕಾರು ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣ ಅಂತಾ ಆರೋಪಿಸಿ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲ ಕಾಲ ಮೈಸೂರು-ಊಟಿ ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ, ಮಹಿಳೆಯ ಮೃತದೇಹ ಕೆ.ಆರ್. ಆಸ್ಪತ್ರೆ ಶವಾಗಾರಕ್ಕೆ ರವಾನೆಯಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.