ಕುಂದಗೋಳ, ಚಿಂಚೋಳಿ‌ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು

ಬೆಂಗಳೂರು: ಕುಂದಗೋಳ ಹಾಗೂ ಚಿಂಚೋಳಿ‌ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಕಸರತ್ತು ಶುರುವಾಗಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಕಾಂಗ್ರೆಸ್ ಹಾಗೂ ಬಿಜೆಪಿ ಸಭೆ ನಡೆಸಲಿವೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಭೆ ಕರೆದಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಧಾರವಾಡ ಹಾಗೂ ಕಲ್ಬುರ್ಗಿ ಜಿಲ್ಲೆಗಳ ಮುಖಂಡರ ಸಭೆ ನಡೆಯಲಿದೆ.

ಡಾ.ಉಮೇಶ್ ಜಾಧವ್ ರಾಜೀನಾಮೆ ಹಾಗೂ ಸಿ.ಎಸ್ ಶಿವಳ್ಳಿ ನಿಧನದಿಂದ  ಕ್ಷೇತ್ರಗಳು ತೆರವಾಗಿದ್ದು, ಸಭೆ ನಡೆಸಿ ಈ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳನ್ನ ಕಾಂಗ್ರೆಸ್ ನಾಯಕರು ಘೋಷಿಸಲಿದ್ದಾರೆ. ಚಿಂಚೋಳಿ ಕ್ಷೇತ್ರಕ್ಕೆ ಬಾಬುರಾವ್ ಚೌಹ್ಹಾಣ್ ಹಾಗೂ ಸುಭಾಷ್ ರಾಠೋಡ್ ಹೆಸರುಗಳು ಚಾಲ್ತಿಯಲ್ಲಿವೆ. ಇನ್ನು ಕುಂದಗೋಳ ಕ್ಷೇತ್ರಕ್ಕೆ ದಿವಂಗತ ಶಿವಳ್ಳಿ ಪತ್ನಿ ಕುಸುಮ ಅವ್ರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಎರಡೂ ಕ್ಷೇತ್ರಗಳನ್ನ ಮತ್ತೆ ವಶಕ್ಕೆ ಪಡೆಯಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಮೈತ್ರಿ ಪಕ್ಷ ಜೆಡಿಎಸ್‌ ಅಭ್ಯರ್ಥಿಗಳನ್ನ ಕಣಕ್ಕಿಳಿಸದೇ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿವೆ ಎನ್ನಲಾಗುತ್ತಿದೆ.

ಬಿಜೆಪಿಯಲ್ಲೂ ಚಿಂಚೋಳಿ ಹಾಗೂ ಕುಂದಗೋಳ ಈ ಎರಡೂ ಕ್ಷೇತ್ರಗಳಿಗೆ ಟಿಕೆಟ್ ಆಕಾಂಕ್ಷಿಗಳಿಂದ ಪೈಪೋಟಿ ಶುರುವಾಗಿದೆ. ಚಿಂಚೋಳಿ ಕ್ಷೇತ್ರಕ್ಕೆ ತನ್ನ ಸಹೋದರ ರಾಮಚಂದ್ರ ಜಾಧವ್‌ಗೆ ಟಿಕೆಟ್ ನೀಡಬೇಕೆಂದು ಉಮೇಶ್ ಜಾಧವ್ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಕಳೆದ ಚುನಾವಣೆಯಲ್ಲಿ ಜಾಧವ್ ವಿರುದ್ಧ ಸ್ಪರ್ಧಿಸಿ 18 ಸಾವಿರ ಮತಗಳಿಂದ ಪರಾಭವಗೊಂಡಿದ್ದ ಸುನೀಲ್ ವಲ್ಯಾಪುರೆ ಅವರು ಸಹ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಹೆಸರು ಕೂಡ ಕೇಳಿಬರುತ್ತಿದೆ. ಅಲ್ಲದೇ ಕುಂದಗೋಳ ಕ್ಷೇತ್ರಕ್ಕೆ ಚಿಕ್ಕನಗೌಡರ ಹಾಗೂ ಡಿ.ಆರ್ ಪಾಟೀಲ್ ಹೆಸರುಗಳು ಕೇಳಿ ಬರುತ್ತಿದೆ. ನಾಮಪತ್ರ ಸಲ್ಲಿಸಲು ಏ.29 ಕೊನೆಯ ದಿನವಾಗಿದ್ದು, ಮೇ.19ರಂದು ಚುನಾವಣೆ ನಡೆಯಲಿದೆ. ಹಾಗಾಗಿ ತಮ್ಮ ತಮ್ಮ ಅಭ್ಯರ್ಥಿಗಳನ್ನ ಕಾಂಗ್ರೆಸ್, ಬಿಜೆಪಿ ಅಂತಿಮಗೊಳಿಸಲಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv