9 ವರ್ಷದ ಕಂದಮ್ಮನಿಗೆ ಬ್ಲಡ್ ಕ್ಯಾನ್ಸರ್, ಚಿಕಿತ್ಸೆಗೆ ಹಣವಿಲ್ಲದೇ ತಾಯಿ ಪರದಾಟ

ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಜಿಗಳೂರು ಗ್ರಾಮದ ತಾಯಿ ಒಬ್ಬರು ತನ್ನ ಕರುಳ ಕುಡಿಯನ್ನ ಉಳಿಸಿಕೊಳ್ಳಲು ನಡೆಸ್ತಿರುವ ಹೋರಾಟ ಮನಕಲಕುತ್ತಿದೆ. ಕುಮಾರ ವಿಕಾಸ ಯಲ್ಲಪ್ಪ ಮಾದರ (9) ಅನ್ನೋ ಬಾಲಕ ಮಹಾಮಾರಿ ಕ್ಯಾನ್ಸರ್​ನಿಂದ ಬಳಲುತ್ತಿದ್ದಾನೆ. ಹೆತ್ತ ಮಗನನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾಳೆ. ಆದರೆ ಕಿತ್ತು ತಿನ್ನೋ ಬಡತನ ಮಗನ ಆರೋಗ್ಯದ ಮೇಲೆ ಮತ್ತಷ್ಟು ಬರೆ ನೀಡಿದೆ.
ಗ್ರಾಮದ ಕುಮಾರವಿಕಾಸ ಯಲ್ಲಪ್ಪ ಮಾದರ(9) ತೀವ್ರ ಜ್ವರದಿಂದ ಬಳಲುತ್ತಿದ್ದ. ಹೀಗಾಗಿ ಆತನನ್ನ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ವಾಸಿಯಾಗದ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 15 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತಾದರೂ ವಾಸಿಯಾಗಿರಲಿಲ್ಲ. ಕೊನೆಗೆ ವೈದ್ಯರು ಹೆಚ್ಚಿನ ಪರೀಕ್ಷೆ ಮಾಡಿದಾಗ ಬ್ಲಡ್ ಕ್ಯಾನ್ಸರ್ ಇರೋದು ಗೊತ್ತಾಗಿದೆ.
ಹೀಗಾಗಿ ಕಿಮ್ಸ್ ವೈದ್ಯರು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಕರೆದೊಯ್ಯುವಂತೆ ರೆಫರ್ ಮಾಡಿದ್ದಾರೆ. ಸದ್ಯ ಬಾಲಕ ಕೆಎಲ್​ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದ್ರೆ ಬಾಲಕನಿಗೆ ಚಿಕಿತ್ಸೆ ಕೊಡಿಸುವಷ್ಟು ಹಣ ಅವರ ಕುಟುಂಬದಲ್ಲಿ ಇಲ್ಲ. ಇದನ್ನ ಮನಗಂಡ ಕೆಎಲ್ಇ ಆಸ್ಪತ್ರೆ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ ನೆರವಿಗೆ ಬಂದಿದಾರೆ. ಊಟ, ವಸತಿ ಹಾಗೂ ಔಷಧಿಗಳಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕ್ಯಾನ್ಸರ್ ವಾಸಿಯಾಗ್ಬೇಕಾದರೆ ಇನ್ನೂ ಎರಡೂವರೆ ವರ್ಷ ಚಿಕಿತ್ಸೆ ನೀಡ್ಬೇಕು. ಅದಕ್ಕಾಗಿ 7 ಲಕ್ಷಕ್ಕೂ ಹೆಚ್ಚಿನ ಹಣ ಬೇಕಾಗುತ್ತದೆ. ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ ಬೇಕಾಗುತ್ತದೆ. ಹಣ ಇಲ್ಲದೇ ಈಗ ಮುಂದೇನು ಅನ್ನೋ ಚಿಂತೆ ತಾಯಿ ಜಯಶ್ರೀ ಅವರನ್ನ ಕಾಡುತ್ತಿದೆ.
ಸದ್ಯ ಆಸ್ಪತ್ರೆ ಸಿಬ್ಬಂದಿ ನೆರವಿನಿಂದ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಬಡತನದಲ್ಲಿರುವ ಕುಟುಂಬಕ್ಕೆ ಮಗನ ರಕ್ಷಣೆಯನ್ನ ಹೇಗೆ ಮಾಡೋದು ಅನ್ನೋ ಚಿಂತೆ ಕಾಡುತ್ತಿದೆ. ಈಗಾಗಲೇ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಬೇಕು ಅಂತಾ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ದಾನಿಗಳ ಬಳಿ ಸಹಾಯ ಹಸ್ತ ಕೇಳಿದ್ದಾರೆ. ಇನ್ನು, ನಿಮಗೇನಾದರೂ ಸಹಾಯ ಮಾಡಬೇಕು ಅನ್ನೋ ಮನಸ್ಸಿದ್ದರೆ ಈ ಕೆಳಗಿನ ಬ್ಯಾಂಕ್​ ಖಾತೆಗೆ ಹಣ ದಾನ ಮಾಡಬಹುದಾಗಿದೆ.
ಕುಮಾರವಿಕಾಸ ಯಲ್ಲಪ್ಪ ಮಾದರ
ವಿಜಯಾ ಬ್ಯಾಂಕ್, ಶಾಖೆ- ತಡಸ
ಉಳಿತಾಯ ಸಂಖ್ಯೆ-120401111003710
ಐಎಫ್​ಸಿ ನಂ. – ವಿಐಜೆ 80001204
ಫೋನ್ ನಂಬರ್: 8497057928 (ಜಯಶ್ರೀ ಬಾಲಕನ ತಾಯಿ)

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv