ಬಹಿರಂಗ ಪ್ರಚಾರಕ್ಕೆ ತೆರೆ, ಅಭ್ಯರ್ಥಿಗಳಿಗೆ ನಾಳೆ ನಿರ್ಣಾಯಕ ‘ಗೋಲ್ಡನ್ ಅವರ್’, ಅಂತಿಮ ನಗು ಮತದಾರ ಪ್ರಭುವಿನದೇ..!

ಬೆಂಗಳೂರು: ದೇಶಾದ್ಯಂತ ಏಪ್ರಿಲ್ 23 ರಂದು ನಡೆಯಲಿರುವ ಮೂರನೇ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ಮೂರನೇ ಹಂತದ ಚುನಾವಣೆ 13 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 116 ಕ್ಷೇತ್ರಗಳಿಗೆ ನಡೆಯಲಿದೆ. ಪ್ರಮುಖ ಅಭ್ಯರ್ಥಿಗಳೆಂದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಶಶಿ ತರೂರ್ ಇಬ್ಬರೂ ಕೇರಳದಲ್ಲಿ ಚುನಾವಣೆ ಎದುರಿಸಲಿದ್ದಾರೆ. ಇದೇ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ಶಾ ಅವರು ಲೋಕಸಭೆಗೆ ಸ್ಫರ್ಧಿಸಿದ್ದು, ಗುಜರಾತ್​ನ ಗಾಂಧಿನಗರ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ. ಇನ್ನೂ ಮಹಾರಾಷ್ಟ್ರದಿಂದ ಎನ್​ಸಿಪಿ ಅಧ್ಯಕ್ಷ ಶರತ್ ಪವಾರ್ ಅವರ ಪುತ್ರಿ, ಹಾಲಿ ಸಂಸದೆ ಸುಪ್ರಿಯಾ ಸುಳೆ ಅವರು ಕಣದಲ್ಲಿದ್ದಾರೆ. ಮೂರನೇ ಹಂತದ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳು ರೋಡ್ ಶೋ, ಱಲಿ ನಡೆಸಿ ಬಿಸಿಲಿನಲ್ಲಿ ಬಳಲಿ ಬೆಂಡಾಗಿದ್ದಾರೆ. ನಾಳೆ ಅಭ್ಯರ್ಥಿಗಳಿಗೆ ‘ಗೋಲ್ಡನ್ ಅವರ್’ ಎನಿಸಿದ್ದು ಮತದಾರರನ್ನ ಸೆಳೆಯಲು ನಾನಾ ತಂತ್ರಗಳನ್ನ ರೂಪಿಸಿಕೊಂಡಿದ್ದಾರೆ. ಕೊನೆ ಹಂತದ ಕಸರತ್ತಿನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ. ಏಪ್ರಿಲ್ 23ರಂದು ಬೆಳಗ್ಗೆ 7 ಘಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ.

ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ
ಇನ್ನು, ರಾಜ್ಯದಲ್ಲಿ ನಡೆಯಲಿರುವ ಎರಡನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ 14 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಉತ್ತರ ಕರ್ನಾಟಕ ಭಾಗದ 14 ಲೋಕಸಭೆ ಕ್ಷೇತ್ರಗಳಲ್ಲಿ 237 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 14 ಕ್ಷೇತ್ರಗಳ ಪೈಕಿ ಶಿವಮೊಗ್ಗ ಹಾಗೂ ಕಲಬುರ್ಗಿ ಮತಕ್ಷೇತ್ರಗಳನ್ನು ಹೈವೋಲ್ಟೇಜ್ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಗಳ ಪುತ್ರರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ನಡುವೆ ನೇರ ಹಣಾಹಣಿ ಇದೆ. ಇನ್ನು, ಕಲಬುರ್ಗಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್​ನಿಂದ ಜಿಗಿದು ಬಿಜೆಪಿಯಿಂದ ಕಣಕ್ಕಿಳಿದಿರುವ ಡಾ.ಉಮೇಶ್ ಜಾಧವ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಕ್ಷೇತ್ರವೂ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಗಣಿತವಾಗಿದೆ. ಇಬ್ಬರ ನಡುವೆ ನೇರ ಹಣಾಹಣಿ ಸ್ಪರ್ಧೆ ಏರ್ಪಟ್ಟಿದೆ.

ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಮೈತ್ರಿ ಅಭ್ಯರ್ಥಿ, ಮಾಜಿ ಸಚಿವ ವಿನಯ್ ಕುಲಕರ್ಣಿ ನಡುವೆಯೂ ತೀವ್ರ ಪೈಪೋಟಿ ಇದೆ. ರಾಜ್ಯದಲ್ಲಿ ಮಂಗಳವಾರ 2.67 ಕೋಟಿ ಮತದಾರರು 237 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಮಧ್ಯೆ, ಚುನಾವಣಾ ಆಯೋಗವೂ ಬಿಗಿ ಭದ್ರತೆಯೊಂದಿಗೆ ಸುಸೂತ್ರವಾಗಿ ಚುನಾವಣೆ ನಡೆಸಲು ಸರ್ವಸನ್ನದ್ಧವಾಗಿದೆ. ಏನೇ ಆಗಲಿ ಅಂತಿಮ ನಗು, ಮತದಾರ ಪ್ರಭುವಿನದೇ ಎಂಬುದು ಗಮನಾರ್ಹ.