ರಫೆಲ್ ಡೀಲ್, ಇಂದು ಕೇಂದ್ರದ ಕೈಗೆ ಸಿಎಜಿ ವರದಿ

ಸದ್ಯ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯನ್ನ ಎದುರಿಸೋಕೆ ಕಾಂಗ್ರೆಸ್ ಬಳಿ ಇರುವ ಅತೀ ದೊಡ್ಡ ಅಸ್ತ್ರ ಅಂದ್ರೆ ಅದು ರಫೆಲ್ ಡೀಲ್. ಇದೇ ವಿಚಾರವನ್ನ ಇಟ್ಟುಕೊಂಡು ಈಗಾಗಲೇ ಸಾಕಷ್ಟು ಬಾರಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ಈಗಲೂ ತನ್ನ ಆರೋಪಗಳ ಅಸ್ತ್ರವನ್ನ ಸಮಯ ಸಿಕ್ಕಾಗಲೆಲ್ಲಾ ಉಪಯೋಗಿಸುತ್ತಲೇ ಇರುತ್ತೆ.
ಇದೀಗ ಕಾಂಗ್ರೆಸ್ ರಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಸಿಎಜಿ ನೀಡುವ ವರದಿಗಾಗಿ ಕಾತರದಿಂದ ಕಾಯ್ತಿದೆ. ಸಿಎಜಿ ವರದಿಯಲ್ಲಿ ರಫೆಲ್ ಹಗರಣದ ಬಗ್ಗೆ ತನಗೆ ಅನುಕೂಲಕರವಾಗುವ ಮಾಹಿತಿ ಏನಾದ್ರೂ ಇದೆಯಾ ಅಂತ ಕಾಂಗ್ರೆಸ್ ನಿರೀಕ್ಷೆಯಲ್ಲಿದೆ. ಇಷ್ಟೆಲ್ಲಾ ಪೀಠಿಕೆ ಯಾಕಂದ್ರೆ, ಇಂದು ರಫೆಲ್ ಡೀಲ್​ ಕುರಿತಂತೆ ಸಿಎಜಿ ತಯಾರಿಸಿರುವ ವರದಿ ಕೇಂದ್ರ ಸರ್ಕಾರದ ಕೈ ಸೇರಲಿದೆ.
59 ಸಾವಿರ ಕೋಟಿ ರೂಪಾಯಿ ಡೀಲ್​ನ ಬಗ್ಗೆ ಸಿಎಜಿ ಇಂದು ತನ್ನ ವರದಿಯನ್ನ ಸಲ್ಲಿಸುವ ಸಾಧ್ಯತೆ ಇದೆ. ಸದ್ಯ ಬಜೆಟ್ ಅಧಿವೇಶನ ನಡೀತಿದ್ದು, ಈ ಅಧಿವೇಶನದಲ್ಲೇ ವರದಿಯನ್ನ ಮಂಡಿಸುವ ಸಾಧ್ಯತೆ ಇದೆ. ಹೀಗಾಗಿ ಇಂದೇ ವರದಿ ಕೇಂದ್ರದ ಕೈ ಸೇರಲಿದೆ ಎನ್ನಲಾಗ್ತಿದೆ. ಸಿಎಜಿ ತನ್ನ ವರದಿಯನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತಿದ್ದಂತೆ, ಅದರ ಒಂದೊಂದು ಪ್ರತಿಯನ್ನ ರಾಷ್ಟ್ರಪತಿ ಹಾಗೂ ಕೇಂದ್ರ ಹಣಕಾಸು ಸಚಿವಲಾಯಕ್ಕೂ ಕಳಿಸಲಾಗುತ್ತೆ. ನಂತರ ಅಧಿವೇಶನದಲ್ಲಿ ವರದಿ ಮಂಡನೆಗೆ ದಿನಾಂಕ ನಿಗದಿಪಡಿಸಲಾಗುತ್ತದೆ.
ಅಲ್ಲದೆ, ವಿರೋಧ ಪಕ್ಷದ ನಾಯಕರ ನೇತೃತ್ವದ ಸಾರ್ವಜನಿಕ ಲೆಕ್ಕ ಸಮಿತಿಗೂ ವರದಿಯನ್ನ ಕಳಿಸಲಾಗುತ್ತದೆ. ಅವಶ್ಯಕತೆ ಇದ್ದಲ್ಲಿ ಹೆಚ್ಚಿನ ವಿಚಾರಣೆ ನಡೆಸಿ, ಈ ಸಮಿತಿ ವರದಿಯ ಮೌಲ್ಯಮಾಪನ ಮಾಡುತ್ತದೆ. ಸದ್ಯ ಲೋಕಸಭೆಯ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಈ ಸಮಿತಿಯ ನೇತೃತ್ವವನ್ನ ವಹಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv