ಅಸೆಂಬ್ಲಿ ಉಪಚುನಾವಣೆ: ಕಾಂಗ್ರೆಸ್ಸಿಗೇ ಮೈತ್ರಿ ಟಿಕೆಟ್​​?

ಬೆಂಗಳೂರು: ಕಾಂಗ್ರೆಸ್​ ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು, ಚಿಂಚೋಳಿ ಕ್ಷೇತ್ರಕ್ಕೆ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೂಚಿಸುವ ವ್ಯಕ್ತಿಗೆ ಟಿಕೆಟ್ ನೀಡಲಿದೆ ಎನ್ನಲಾಗಿದೆ. ಜೊತೆಗೆ ಕುಂದಗೋಳ ಕ್ಷೇತ್ರದಲ್ಲಿ ಶಿವಳ್ಳಿ ನಿಧನದ ಅನುಕಂಪದ ಲಾಭ ಪಡೆಯಲು ಅವರ ಪತ್ನಿ ಕುಸುಮ ಅವರಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗಿದೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಧಾರವಾಡ ಹಾಗೂ ಕಲಬುರ್ಗಿ ಜಿಲ್ಲೆಗಳ ಮುಖಂಡರ ಜೊತೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲಾಯ್ತು. ಎರಡೂ ಕ್ಷೇತ್ರಗಳ ಒಮ್ಮತದ ಅಭ್ಯರ್ಥಿ ಆಯ್ಕೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಮುಖಂಡರು, ಬಿಜೆಪಿ ವಿರುದ್ಧ ಹೇಗೆ ರಣತಂತ್ರ ರೂಪಿಸಬೇಕು ಎಂಬುದರ ಕುರಿತು ಗಂಭೀರ ಚರ್ಚೆ ನಡೆಸಿದ್ರು. ಸಭೆ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಚಿಂಚೋಳಿ ಹಾಗೂ ಕುಂದಗೋಳ ಮುಖಂಡರ ಜೊತೆ ಸಭೆ ನಡೆಸಲಾಗಿದೆ. ಸ್ಥಳೀಯ ಮುಖಂಡರು ತಮ್ಮ ಅಭಿಪ್ರಾಯವನ್ನ ಮಂಡಿಸಿದ್ದಾರೆ. ನಾಳೆ ಯಾರಿಗೆ ಟಿಕೆಟ್ ಅನ್ನೋದನ್ನ ಘೋಷಿಸುತ್ತೇವೆ. ಎರಡೂ ಕಡೆ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಆದ್ರೆ, ಮಲ್ಲಿಕಾರ್ಜುನ ಖರ್ಗೆಯ ಅವ್ರನ್ನ ಕೇಳಿ ಅಭ್ಯರ್ಥಿ ಅಂತಿಮ ಮಾಡ್ತೇವೆ ಅಂತಾ ಹೇಳಿದರು. ಉಪಚುನಾವಣೆ ಮೇ 19 ರಂದು ಮತದಾನ ನಡೆಯಲಿದ್ದು, ಮೇ 23ಕ್ಕೆ ಮತ ಎಣಿಕೆ ನಡೆಯಲಿದೆ. ಇನ್ನು ನಾಮಪತ್ರ ಸಲ್ಲಿಸಲು ಏಪ್ರಿಲ್ 29 ಕೊನೆಯ ದಿನವಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv