ಬಿಜೆಪಿಯಲ್ಲಿ ಮತ್ತೆ ಭಿನ್ನಮತ: ಪಾದಯಾತ್ರೆಗೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್​ ಗೈರು

ಬೆಂಗಳೂರು: ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯಿಸಿ ಬಿಜೆಪಿ ರಾಮನಗರದಿಂದ ಬೆಂಗಳೂರಿಗೆ ಇಂದಿನಿಂದ ಮೂರು ದಿನಗಳ ಪಾದಯಾತ್ರೆ ಆರಂಭಿಸಿದೆ. ಆದ್ರೆ, ಈ ವೇಳೆ ಕೆಲ ಮುಖಂಡರು ಬರುವ ಮೊದಲೇ ಪಾದಯಾತ್ರೆ ಆರಂಭಿಸಿರುವುದು, ಬಿಜೆಪಿಯಲ್ಲಿ ಇನ್ನು ಭಿನ್ನಮತ ಇದೆ ಎಂಬುದನ್ನು ಮತ್ತೆ ತೋರಿಸಿ ಕೊಟ್ಟಿದೆ.
ರಾಮನಗರ ಜಿಲ್ಲಾ ಬಿಜೆಪಿ ಮುಖಂಡರಲ್ಲಿರೋ ಭಿನ್ನಮತ ಪಾದಯಾತ್ರೆ ವೇಳೆ ಬಹಿರಂಗಗೊಂಡಿದೆ. ಇಂದು ಬೆಳಿಗ್ಗೆ 10 ಗಂಟೆಗೆ ರಾಮನಗರದಿಂದ ಪಾದಯಾತ್ರೆ ಆರಂಭವಾಗಬೇಕಿತ್ತು. ಆದ್ರೆ ಸ್ವಲ್ಪ ತಡವಾಗಿ ಆರಂಭವಾಯಿತು. ಪಾದಯಾತ್ರೆ ರಾಮನಗರದಿಂದ ಮುಂದೆ ಸಾಗಿದ್ರೂ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಮಾತ್ರ ಇತ್ತ ಮುಖ ಮಾಡಿಲ್ಲ. ಇದಕ್ಕೆ ಭಿನ್ನಮತವೇ ಕಾರಣ ಎನ್ನಲಾಗ್ತಿದೆ. ಇನ್ನೊಂದೆಡೆ ಭಿನ್ನಮತದಿಂದಾಗೇ ಯೋಗೇಶ್ವರ್​ ಬರುವ ಮೊದಲೇ ಪಾದಯಾತ್ರೆ ಪ್ರಾರಂಭಿಸಲಾಗಿದೆ ಎನ್ನಲಾಗ್ತಿದೆ. ಅಲ್ಲದೇ, ಪಾದಯಾತ್ರೆಗೆ ಮೂರು ಸಾವಿರ ರೈತರನ್ನ ಸೇರಿಸಲು ಪ್ಲಾನ್ ಮಾಡಿಕೊಳ್ಳಲಾಗಿತ್ತು. ಆದ್ರೆ, ನಿರೀಕ್ಷೆಯಂತೆ ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆಗೆ ಆಗಮಿಸಿಲ್ಲ. ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾದ ಬಿಜೆಪಿ ಪಾಳಯದಲ್ಲೇ ಭಿನ್ನಮತದ ಹೊಗಯಾಡುತ್ತಿರುವುದು ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv