‘ಸಿ.ಡಿ’ ಸ್ಫೋಟಕ್ಕೆ ಕಲಾಪ ಬಲಿ, ನಾಳೆಯೂ ಬಜೆಟ್ ಮೇಲಿನ ಚರ್ಚೆ ಕನಸೇ..!

ಬೆಂಗಳೂರು: ಇಂದಿನ ವಿಧಾನಸಭೆ, ಪರಿಷತ್ ಸದನಗಳ ಕಲಾಪ ಸಿ.ಡಿ ಪ್ರಕರಣದ ಗಲಾಟೆಗೆ ಬಲಿಯಾಗಿವೆ. ಇಂದು ಉಭಯ ಸದನಗಳಲ್ಲಿ ಬಜೆಟ್ ಮೇಲೆ ಚರ್ಚೆ ನಡೆಯಬೇಕಿತ್ತು. ಆದ್ರೆ ಸಿ.ಡಿ ಅಸ್ತ್ರಕ್ಕೆ ಕಲಾಪ ವ್ಯರ್ಥವಾಗಿವೆ.

ಆಡಳಿತ, ವಿಪಕ್ಷ ಸದಸ್ಯರು ಇಡೀ ದಿನ ಪರಸ್ಪರ ಸಿ.ಡಿ ಕೆಸರೆರಚಾಟದಲ್ಲಿ ಮುಳುಗಿದ್ದರು. ಪ್ರಕರಣದ ಸಂಬಂಧ ಸ್ಪೀಕರ್​ ರಮೇಶ್​ ಕುಮಾರ್ ಎಸ್​​ಐಟಿಗೆ ತನಿಖೆಗೆ ನೀಡುವಂತೆ ಸಿಎಂ ಕುಮಾರಸ್ವಾಮಿಯವರಿಗೆ ಸೂಚಿಸಿದರು. ಆದ್ರೆ ಸ್ಪೀಕರ್​ ಅವರ ಈ ನಿರ್ಧಾರಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದನ ಸಮಿತಿ ಇಲ್ಲವೇ ನ್ಯಾಯಾಂಗ ತನಿಖೆಗೆ ನಡೆಸುವಂತೆ ವಿಪಕ್ಷ ಸದಸ್ಯರು ಪಟ್ಟು ಹಿಡಿದರು. ಈ ನಡುವೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗಲಾಟೆ ಶುರುವಾದವು. ಈ ಹಿನ್ನೆಲೆ ಸ್ಪೀಕರ್​ ಕಲಾಪವನ್ನು ನಾಳೆಗೆ ಮುಂದೂಡಿದರು.

ಸಿ.ಡಿ ಪ್ರಕರಣವನ್ನ ಎಸ್ಐಟಿಗೆ ವಹಿಸದಂತೆ ನಾಳೆಯೂ ಕಲಾಪ ನಡೆಸಲು ಬಿಡದಂತೆ ಬಿಜೆಪಿ ನಾಯಕರು ಪಟ್ಟು ಮುಂದುವರೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ನಾಳೆಯೂ ಮತ್ತೊಂದು ದಿನದ ಬಜೆಟ್ ಮೇಲಿನ ಚರ್ಚೆ ಬಲಿ ಸಾಧ್ಯತೆ ಇದೆ. ಫೆ.11 ರಿಂದ 15ರ ವರೆಗೂ ಬಜೆಟ್ ಮೇಲಿನ‌ ಚರ್ಚೆಗೆ ನಿಗದಿ ಮಾಡಲಾಗಿತ್ತು. ಫೆ.12ರಂದು ಧನ ವಿನಿಯೋಗ ಮಸೂದೆ ಮಂಡಿಸುವ ಸಾಧ್ಯತೆ ಇತ್ತು. ಬಿಜೆಪಿಯವರ ಬಿಗಿಪಟ್ಟು ಹೀಗೆಯೇ ಮುಂದುವರೆದರೆ ಬುಧವಾರವೇ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಬಿಜೆಪಿಯವರ ಬಿಗಿ ನಿಲುವಿನ ಕಾರಣಕ್ಕೆ ಇನ್ನೂ ಎರಡು ದಿನ ಇರುವಾಗಲೇ ಅಧಿವೇಶನವನ್ನು ಅಂತ್ಯಗೊಳಿಸಿದರೂ ಅಚ್ಚರಿ ಇಲ್ಲ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv