ಇನ್ಮೇಲೆ ಶಾಲಾ ಕಾಲೇಜುಗಳಲ್ಲೇ ಬಸ್ ಪಾಸ್ ವಿತರಣೆ: ಸಚಿವ ಡಿ.ಸಿ ತಮ್ಮಣ್ಣ

ಬೆಂಗಳೂರು: ಪ್ರಸಕ್ತ ವರ್ಷದಿಂದ ಎಲ್ಲಾ ಶಾಲಾ ಕಾಲೇಜುಗಳಲ್ಲೇ ಬಸ್ ಪಾಸ್ ವಿತರಿಸುತ್ತೇವೆ. ಹಿಂದಿನ ವರ್ಷದವರೆಗೆ ಬಿಎಂಟಿಸಿ ಕೌಂಟರ್​ನಲ್ಲಿ ಪಾಸ್ ನೀಡಲಾಗ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ಶಾಲಾ ಕಾಲೇಜುಗಳಲ್ಲೇ ಪಾಸ್ ವಿತರಿಸುತ್ತೇವೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೊಬೈಲ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ಬಸ್​ಪಾಸ್​ಗೆ ಅರ್ಜಿ ಹಾಕಬಹುದು. ವಿದ್ಯಾರ್ಥಿಗಳ ಶಾಲಾ, ಕಾಲೇಜು ಅಥವಾ ಅವರ ವಿಳಾಸಕ್ಕೆ ಪಾಸ್ ವಿತರಣೆ ಆಗುತ್ತೆ. ಈ ತಿಂಗಳ ಕೊನೆಯವರೆಗೂ ಹಿಂದಿನ ಬಸ್​ಪಾಸ್ ಮಾನ್ಯವಿರುತ್ತದೆ ಎಂದು ಹೇಳಿದರು.
ಸಚಿವ ಪುಟ್ಟರಾಜು ಮತ್ತು ತಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎನ್ನುವ ವಿಷಯದ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿರುವ ನಾವೆಲ್ಲರೂ ಒಂದು‌ ಕುಟುಂಬದ ಸದಸ್ಯರಿದ್ದಂತೆ. ಮಂಡ್ಯ ಜಿಲ್ಲೆಯ ನಾಯಕತ್ವದ ವಿಷಯವನ್ನ ಪಕ್ಷದ ಮುಖಂಡರು ನಿರ್ಧರಿಸುತ್ತಾರೆ. ಪುಟ್ಟರಾಜು ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು, ತಮಗೆ ಸಚಿವ ಸ್ಥಾನ ಸಿಗಲು ದೇವೇಗೌಡರ ಬೆಂಬಲವಿದೆ ಎನ್ನುವ ವಿಚಾರವಾಗಿ ಮಾತನಾಡಿ, ನಾನು ದೇವೇಗೌಡರ ಮನೆಗೆ ಮಗಳನ್ನ ಕೊಟ್ಟಿದ್ದೇನೆ. ಅವರ ಕುಟುಂಬ ಬೇರೆ ನಮ್ಮ ಕುಟುಂಬ ಬೇರೆ. ನಾನು ಅವರ ಸಂಬಂಧಿಕ ಅಷ್ಟೇ. ನನ್ನ ಯೋಗ್ಯತೆ ಹಾಗೂ ಅರ್ಹತೆ ಆಧಾರದ ಮೇಲೆ ಸಚಿವ ಸ್ಥಾನ ಸಿಕ್ಕಿದೆ. ಸಂಬಂಧವೇ ಬೇರೆ ರಾಜಕಾರಣ ಬೇರೆ ಎಂದರು. ಹಾಗೇ ನೋಡಿದ್ರೆ ನಾನು 1999ರಲ್ಲಿ ಕಾಂಗ್ರೆಸ್​ನಿಂದ ಗೆದ್ದಿದ್ದೆ. ಆನಂತರ ಬಿಜೆಪಿಗೆ ಹೋಗಿದ್ದೆ ಎಂದು ಹೇಳಿದರು.
ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ದೇಶದಲ್ಲಿ ಉತ್ತಮ ಸ್ಥಾನ ಪಡೆದಿವೆ. ಮುಂದೆಯೂ ಕೂಡ ಉತ್ತಮವಾದ ಸೇವೆಯನ್ನು ಜನರಿಗೆ ಒದಗಿಸುತ್ತೇವೆ. ಮೆಟ್ರೋದಲ್ಲಿ ಪ್ರಯಾಣಿಸುವಾಗ ಸಾರ್ವಜನಿಕರನ್ನು ವಿಚಾರಿಸಿದೆ. ಸಾರ್ವಜಿನಿಕರು ಕೂಡಾ ಬಿಎಂಟಿಸಿ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ರು. ಆದರೆ, ಸಮಯಕ್ಕೆ ಸರಿಯಾಗಿ ಹೋಗೋದಕ್ಕೆ ಆಗುವುದಿಲ್ಲ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv