30 ಪ್ರಯಾಣಿಕರನ್ನು ರಕ್ಷಿಸಿದ ಬಸ್​​ ಚಾಲಕನಿಗೆ ಸಾರ್ವಜನಿಕರಿಂದ ಸನ್ಮಾನ

ಧಾರವಾಡ: ವಿದ್ಯಾರ್ಥಿಗಳಿಂದ ತುಂಬಿದ್ದ ಸರ್ಕಾರಿ ಬಸ್​ ಇತ್ತೀಚೆಗೆ ರೈಲ್ವೇ ಗೇಟ್ ಕ್ರಾಸಿಂಗ್​​ನಲ್ಲಿ ಸಾಗುತ್ತಿದ್ದ ವೇಳೆ, ಸಿಗ್ನಲ್​ ಇಲ್ಲದೆಯೇ ರೈಲ್ವೆ ಇಂಜಿನ್​ ಸ್ಪೀಡಾಗಿ ಬಂದಿತ್ತು. ಈ ವೇಳೆ, ಕೆಎಸ್​​ಆರ್​ಟಿಸಿ ಬಸ್​​ ಚಾಲಕ ಶಬ್ಬೀರ್​ ಪತ್ತೆಸಾಬ್​ ಹಾಗೂ ನಿರ್ವಾಹಕಿ ದ್ರಾಕ್ಷಾಯಿಣಿ ಸಮಯಪ್ರಜ್ಞೆಯಿಂದ 30 ಪ್ರಯಾಣಿಕರ ಪ್ರಾಣ ಉಳಿಸಿದ್ದರು. ಇದರಿಂದ ಸಂಭವನೀಯ ದೊಡ್ಡ ದುರಂತವನ್ನು ತಪ್ಪಿಸಿದ ಚಾಲಕ ಶಬ್ಬೀರ್​​ಗೆ ಸಾರ್ವಜನಿಕರು ಸನ್ಮಾನ ಮಾಡಿ, ಗೌರವಿಸಿದರು.

ಘಟನೆಯ ಹಿನ್ನೆಲೆ
 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದ ಬಸ್​ ಶ್ರೀನಗರದ ರೈಲ್ವೇಗೇಟ್ ಕ್ರಾಸಿಂಗ್​ ಅನ್ನು ದಾಟುತ್ತಿತ್ತು. ಟ್ರೇನ್ ಬರುತ್ತಿರುವುದರ ಬಗ್ಗೆ ಯಾವುದೇ ಮಾಹಿತಿ ಇರದ ಹಿನ್ನೆಲೆಯಲ್ಲಿ, ಗೇಟ್​ ಕೀಪರ್ ಕೂಡ ಗೇಟ್​ ಅನ್ನು ಓಪನ್ ಆಗಿಯೇ ಇಟ್ಟಿದ್ದರು. ಹೀಗಾಗಿ, ಸಹಜವಾಗಿ ಬಸ್​ ರೈಲ್ವೇ ಹಳಿ ದಾಟುತ್ತಿತ್ತು, ಈ ವೇಳೆ ಲೋಕೊಪೈಲಟ್​ ರೈಲ್ವೇ ಇಂಜಿನ್ ರಭಸದಿಂದ ಬಂದಿದೆ. ಇದನ್ನು ಅರಿತ ಬಸ್​ ಡ್ರೈವರ್ ತನ್ನ ಚಾಕಚಕ್ಯತೆಯಿಂದ ಬಸ್​ ಅನ್ನು ಕೊನೆಯ ಕ್ಷಣದಲ್ಲಿ ಹಳಿ ದಾಟಿಸಿದ್ದಾರೆ. ಬಸ್​ ಹಳಿ ದಾಟುತ್ತಿದಂತೆಯೇ ರೈಲ್ವೇ ಇಂಜಿನ್ ಕ್ಷಣಾರ್ಧದಲ್ಲಿ ಪಾಸ್​ ಆಗಿ ಹೋಗಿದೆ. ಹೀಗಾಗಿ, ಬಸ್​​ನಲ್ಲಿದ್ದವರ ಹೃದಯ ಒಂದು ಕ್ಷಣ ಸ್ತಬ್ಧವಾದಂತಾಗಿತ್ತು. ಇನ್ನು ರೈಲ್ವೇ ಇಲಾಖೆಯ ಈ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.