ಬುರ‌್ರಕಥಾ ಖ್ಯಾತಿಯ ಧರೋಜಿ ಈರಮ್ಮಳ ಸಮಾಧಿಗೆ ಇದೆಂಥಾ ಗತಿ..!

ಬಳ್ಳಾರಿ: ಅಕ್ಷರ ಬಾರದಿದ್ದರೂ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ವಿಷಯದ ವಸ್ತುವಾದ ಧರೋಜಿ ಈರಮ್ಮಳ ಸಮಾಧಿ ಈಗ ಅನಾಥವಾಗಿ ಪಾಳುಬಿದ್ದಿದೆ. ಬದುಕಿದ್ದಾಗಲೂ ಸರ್ಕಾರ ಅವರನ್ನು ಗೌರವದಿಂದ ನಡೆಸಿಕೊಳ್ಳಲಿಲ್ಲ. ಈಗ ಮರಣಾನಂತರ ಅವರ ಸಮಾಧಿಗೂ ಕನಿಷ್ಟ ಗೌರವ ಇಲ್ಲದಂತಾಗಿದೆ. ಹೀಗಾಗಿ ಧರೋಜಿಯ ಗ್ರಾಮಸ್ಥರು ಈರಮ್ಮಳ ಸಮಾಧಿಯ ದುರಾವಸ್ಥೆ ಕಂಡು ಮರುಗುತ್ತಿದ್ದಾರೆ. ಬುರ್ರಕಥಾ ಜನಪದ ಕಲಾ ಪ್ರಕಾರದ ಹಾಡುಗಾರಿಕೆ ಮೂಲಕ ರಾಜ್ಯಕ್ಕೆ ಪರಿಚಯವಾಗಿದ್ದ ಧರೋಜಿ ಈರಮ್ಮ ಹಾಡು ನಿಲ್ಲಿಸಿ 4 ವರ್ಷವಾಯಿತು. ಗ್ರಾಮದ ಪಕ್ಕದಲ್ಲೇ ಇವರನ್ನ ಸಮಾಧಿ ಮಾಡಲಾಗಿತ್ತು. ಆಗ ಸಮಾಧಿ ಸುತ್ತ ಉದ್ಯಾನ ನಿರ್ಮಾಣಕ್ಕಾಗಿ ಎರಡು ಎಕರೆ ಜಾಗವನ್ನೂ ಮೀಸಲು ಇರಿಸಲಾಗಿತ್ತು. ಆದರೆ ಇಂದಿಗೂ ಅಲ್ಲಿ ಯಾವುದೇ ಕಾಮಗಾರಿ ಶುರುವಾಗಿಲ್ಲ. ಕನಿಷ್ಟ ಪಕ್ಷ ಸಮಾಧಿ ಸುತ್ತ ಸುರಕ್ಷಾ ಗೋಡೆ ಕೂಡಾ ನಿರ್ಮಿಸಿಲ್ಲ. ಎರಡು ವಾರದ ಹಿಂದೆ ಭಾರೀ ಮಳೆಯಾದಾಗ ಆಶ್ರಯಕ್ಕಾಗಿ ಇಲ್ಲಿಗೆ ಬಂದ ಕರಡಿಗಳು ಈರಮ್ಮಳ ಸಮಾಧಿಯನ್ನು ಹಾಳು ಮಾಡಿವೆ. ಇದನ್ನು ಗಮನಿಸಿದ ಗ್ರಾಮಸ್ಥರು ಕರಡಿಗಳನ್ನು ಓಡಿಸಿ ಮತ್ತೆ ಸಮಾಧಿ ಮೇಲೆ ಮಣ್ಣು ಹಾಕಿದ್ದಾರೆ. ಬುರ‌್ರಕಥಾ ಜಾನಪದ ಪ್ರಕಾರವನ್ನು ಬೆಳಕಿಗೆ ತಂದ ಈರಮ್ಮಳ ಸಮಾಧಿಯ ಸದ್ಯದ ಪರಿಸ್ಥಿತಿ ಪಾಳುಬಿದ್ದಿದೆ. ಮಂಜೂರಾದ 2 ಎಕರೆ ಜಾಗದಲ್ಲಿ ಸುಂದರ ಹಾಗೂ ಸುಸಜ್ಜಿತ ಉದ್ಯಾನ ನಿರ್ಮಿಸಬೇಕು. ಜೊತೆಗೆ ಈರಮ್ಮನವರು ಬಳಸುತ್ತಿದ್ದ ಸಂಗೀತ ಪರಿಕರಗಳನ್ನು ಪ್ರದರ್ಶಿಸಲು ಸುಸಜ್ಜಿತ ವಸ್ತು ಸಂಗ್ರಹಾಲಯವನ್ನು ನಿರ್ಮಿಸಬೇಕೆಂಬುದು ಈರಮ್ಮನವರ ಸಹಕಲಾವಿದರ ಒತ್ತಾಯವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv