“ಇದೇ ಕೊನೆ…”: ರೇಣುಕಾಚಾರ್ಯಗೆ ಯಡಿಯೂರಪ್ಪ ಕ್ಲಾಸ್​..!

ಬೆಂಗಳೂರು: ಎಸ್​ಪಿ ದಿವ್ಯಾ ಗೋಪಿನಾಥ್​ಗೆ ಸಚಿವ ಸಾರಾ ಮಹೇಶ್ ಆವಾಜ್ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​​ ಯಡಿಯೂರಪ್ಪ ಕ್ಲಾಸ್​ ತೆಗೆದುಕೊಂಡಿದ್ದಾರೆ.

ತಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯ ಕ್ರಿಯಾ ಸಮಾಧಿ ಸಂದರ್ಭದಲ್ಲಿ ಸಚಿವ ಸಾ.ರಾ.ಮಹೇಶ್ ಮತ್ತು ತುಮಕೂರು ಎಸ್​ಪಿ ದಿವ್ಯಾ ಗೋಪಿನಾಥ್ ಮಧ್ಯೆ ವಾಗ್ವಾದ ನಡೆದಿತ್ತು. ಈ ವೇಳೆ ಸಾ.ರಾ.ಮಹೇಶ್ ದಿವ್ಯಾ ಗೋಪಿನಾಥ್​ಗೆ ಆವಾಜ್ ಹಾಕಿದ್ದರು. ಇದರಿಂದ ನೊಂದ ದಿವ್ಯಾ, ಸ್ಥಳದಲ್ಲೇ ಕಣ್ಣೀರು ಹಾಕಿದ್ದರು. ಈ ವೇಳೆ ಎಂ.ಪಿ.ರೇಣುಕಾಚಾರ್ಯ, ದಿವ್ಯಾ ಅವರನ್ನು ಸಮಾಧಾನಪಡಿಸಿದ್ದರು. ರೇಣುಕಾಚಾರ್ಯರ ಈ ನಡೆಗೆ ಬಿಎಸ್​ವೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದೇ ಮೊದಲು, ಇದೇ ಕೊನೆ…
ಅವರ ಮಧ್ಯೆ ಗಲಾಟೆ ಆಗುವಾಗ ನೀವ್ಯಾಕೆ ಮಧ್ಯಪ್ರವೇಶ ಮಾಡಿದ್ರಿ..? ನೀವು ಅಲ್ಲಿ ಆಗುತ್ತಿದ್ದ ಗಲಾಟೆಯಲ್ಲಿ ಭಾಗಿಯಾಗಿದ್ದೇಕೆ? ನಿಮಗೆ ಅಲ್ಲಿ ಏನು ಕೆಲಸ ಇತ್ತು? ಎಂದು ಬಿಎಸ್​​ವೈ ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ. ಮೊದಲೇ ಸಾ.ರಾ.ಮಹೇಶ್‌ 4 ಮಂದಿಯ ಮುಂದೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿದುಕೊಂಡಿಲ್ಲ. ಕೊಡಗು ಜಿಲ್ಲೆಯಲ್ಲಾದ ಭೀಕರ ಪ್ರವಾಹ ಪರಿಸ್ಥಿತಿ ಸಮಯದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಮಹೇಶ್ ನಡೆದುಕೊಂಡಿದ್ದು ಹೇಗೆ? ಇಂತಹ ವ್ಯಕ್ತಿತ್ವವಿರುವ ಸಚಿವರ ಬೆನ್ನಿಗೆ ನೀವು ನಿಂತಿರುವುದು ಸರಿಯೇ? ಇನ್ಮುಂದೆ ಸಾ.ರಾ.ಮಹೇಶ್ ವಿಚಾರವಾಗಲೀ, ದಿವ್ಯಾ ಗೋಪಿನಾಥ್ ವಿಚಾರವಾಗಲೀ ನಿಮಗೆ ಬೇಡ. ಸುಖಾಸುಮ್ಮನೆ ಈ ಪ್ರಕರಣದಲ್ಲಿ ನಿಮ್ಮ ಹೇಳಿಕೆಗಳು ಮಾಧ್ಯಮಗಳ ಮುಂದೆ ಏಕೆ ಬರಬೇಕು? ಅಂತಾ ಯಡಿಯೂರಪ್ಪ ಕ್ಲಾಸ್​ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇದೇ ಮೊದಲು, ಇದೇ ಕೊನೇ. ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಆಗುವ ಜಗಳಗಳಿಗೆ ನಾವು ತಲೆ ಹಾಕುವುದು ಬೇಡ. ಸರ್ಕಾರ ಇಂದು ಯಾವ ರೀತಿ ನಡೆದುಕೊಳ್ಳುತ್ತಿದೆ, ಸರ್ಕಾರದ ಅಂಗಗಳು ಎಂದು ಪರಿಗಣಿಸುವ ಸಚಿವರು ಯಾವ ಮಟ್ಟದಲ್ಲಿ ಸಾರ್ವಜನಿಕವಾಗಿ ಬದುಕುತ್ತಿದ್ದಾರೆ ಎಂಬುದು ಅರ್ಥವಾಗಬೇಕಿದೆ. ನೀವು ಇಂತಹ ಪ್ರಕರಣಗಳಲ್ಲಿ ತಲೆ ಹಾಕಬೇಡಿ ಎಂದು ರೇಣುಕಾಚಾರ್ಯಗೆ ಬಿಎಸ್​​ವೈ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.