ಕುಮಾರಸ್ವಾಮಿ ಸಿಎಂ ಅಲ್ವಂತೆ.. ಸಿದ್ದರಾಮಯ್ಯ ಸಿಎಂ ಅಂತೆ..!

ಮೈಸೂರು: ಸಿಎಂ ಕುಮಾರಸ್ವಾಮಿ ಎನ್ನುವ ಬದಲು ಸಿಎಂ ಸಿದ್ದರಾಮಯ್ಯ ಅಂತ ಹೇಳುವ ಮೂಲಕ ವಿಪಕ್ಷ ನಾಯಕ ಬಿ.ಎಸ್​ ಯಡಿಯೂರಪ್ಪ ಯಡವಟ್ಟು ಮಾಡಿಕೊಂಡಿದ್ದಾರೆ.
ಮೈಸೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡುತ್ತ, ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ರಾಜ್ಯದ ಜನರಿಗೆ ಅಪಮಾನ ಮಾಡಿದ್ದಾರೆ ಅನ್ನುವ ಮೂಲಕ ಯಡಿಯೂರಪ್ಪ ಅಪಹಾಸ್ಯಕ್ಕೆ ಈಡಾಗಿದ್ದಾರೆ.
ಅಲ್ಲದೇ ಮತ್ತೆ ಇದೇ ಯಡವಟ್ಟು ಮಾಡುದ ಅವರು, ರೈತರ ಕಣ್ಣಿಗೆ ಮಣ್ಣೆರುಚುವ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರು. ಎರಡು ಬಾರಿ ಮುಖ್ಯಮಂತ್ರಿಯವರ ಹೆಸರನ್ನು ಯಡಿಯೂರಪ್ಪ ತಪ್ಪಾಗಿ ಹೇಳಿದ್ರು. ಕಾರ್ಯಕರ್ತರೊಬ್ಬರು ಕುಮಾರಸ್ವಾಮಿ ಹೆಸರು ಬರೆದುಕೊಟ್ಟ ನಂತರ ಯಡಿಯೂರಪ್ಪ ಮಾತು ಸರಿಪಡಿಸಿಕೊಂಡ್ರು.
ಇನ್ನು ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದ ಅವರು, ಸಂಪುಟ ವಿಸ್ತರಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗಾಗಿ ಕಾಯುತ್ತಿರುವ ನೀವು ಮೊದಲು ಸಾಲಮನ್ನಾ ಮಾಡಿ, ರಾಜ್ಯದ ಜನರಿಗೆ ಅಪಮಾನ ಮಾಡುವುದನ್ನ ನಿಲ್ಲಿಸಿ ಎಂದರು. ನಾನೂ ಅದೃಷ್ಟವಂತ ಸಿಎಂ ಆಗಿದ್ದೇನೆ. 6 ಕೋಟಿ ಜನರಿಂದ ಆಯ್ಕೆಯಾದ ಸಿಎಂ ಅಲ್ಲ ಅಂತೀರಾ? ಮೊದಲು ಈ ರೀತಿಯ ಹೇಳಿಕೆಯನ್ನು ನಿಲ್ಲಿಸಿ ಅಂತ ಗುಡುಗಿದ್ರು. ಸಿಎಂ ಆದ 24 ಗಂಟೆಗಳಲ್ಲಿ ಸಾಲಮನ್ನಾ ಮಾಡ್ತೀವಿ ಅಂದ್ರಿ, ಆದರೆ ಈಗ ರೈತರ ಸಭೆ ಕರೆದು ಹೊಸ ಆಟ ಶುರುಮಾಡಿದ್ದೀರಿ. ಅಷ್ಟಕ್ಕೂ ನಾವು ಬಂದ್ ಮಾಡದೇ ಇದ್ದಿದ್ದರೆ, ಅವರು ರೈತರ ಸಭೆಯನ್ನು ಕರೆಯುತ್ತಿರಲಿಲ್ಲ ಅಂತ ಸಮರ್ಥಿಸಿಕೊಂಡರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv