ಹೀನಾಯವಾಗಿ ಸೋತರೂ ದುರಹಂಕಾರ ಅಡಗಿಲ್ಲ-ಬಿಎಸ್​ವೈ

ಬೆಂಗಳೂರು: ಸಿದ್ದರಾಮಯ್ಯನವರೇ ನೀವು ಮತ್ತು ನಿಮ್ಮ ಪಕ್ಷ ಹೀನಾಯ ಸೋಲು ಅನುಭವಿಸಿದರೂ ನಿಮ್ಮ ದುರಹಂಕಾರ ಅಡಗಿಲ್ಲವಲ್ಲ ಏಕೆ? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ವಿರುದ್ಧ, ಬಿಜೆಪಿ ರಾಜ್ಯಾಧ್ಯಕ್ಷ, ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಕಿಡಿ ಕಾರಿದ್ದಾರೆ. ಚಾಮುಂಡೇಶ್ವರಿಯಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಭಯದಿಂದ ಬದಾಮಿಗೆ ಹೋಗಿ ಕೇವಲ 1600 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ದೊಡ್ಡ ಸಾಧನೆಯೇನಲ್ಲ. ಆದ್ರೆ ಹಣ ಹಾಗೂ ಇತರೆ ಆಮಿಷಗಳಿಗೆ ಬಲಿಯಾಗಿ ಜನ ನನ್ನನ್ನ ಸೋಲಿಸಿದ್ದೀರಿ ಎಂದು ಹೇಳುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಅಂತಾ ಹೇಳಿದ್ದಾರೆ.

 

ಕಾಂಗ್ರೆಸ್​​ನ ಯಾವುದೇ ಶಾಸಕರಿಗೆ ಹಣದ ಆಮಿಷ ಒಡ್ಡಿಲ್ಲ

ಇನ್ನು, ಬಿಜೆಪಿಯುವರು ಕಾಂಗ್ರೆಸ್​ ಶಾಸಕರಿಗೆ ಆಮಿಷ ಒಡ್ಡಿದ್ದಾರೆ ಅನ್ನೋ ಆರೋಪ ಸುಳ್ಳು. ಆದ್ರೆ, ಆತ್ಮ ಸಾಕ್ಷಿಗೆ ಅನುಗುಣವಾಗಿ ನಮ್ಮನ್ನ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದೆ. ನಿಮ್ಮ ಹೇಳಿಕೆ ನಿರಾಧಾರವಾಗಿದೆ ಹಾಗೂ ಬಾಲಿಶತನದಿಂದ ಕೂಡಿದೆ ಅಂತಾ ಬಿಎಸ್​ವೈ ಕಿಡಿಕಾರಿದ್ದಾರೆ.

ಜೆಡಿಎಸ್​​ನ ಅಡಿಯಾಳಾಗಿ ಜನಾಭಿಪ್ರಾಯಕ್ಕೆ ವಿರುದ್ಧವಾದ ಸರ್ಕಾರ
ಅದೇ ರೀತಿ, ನೀವು ಕಾಂಗ್ರೆಸ್​ನ ಒಬ್ಬ ಜವಾಬ್ದಾರಿಯುತ ನಾಯಕನಾಗಿ ಸುಳ್ಳು ಆರೋಪ ಮಾಡುವುದು ನಿಮ್ಮ ಘನತೆಗೆ ತಕ್ಕದಲ್ಲ. ನೀವು ದೊಡ್ಡ ಸ್ವಾಭಿಮಾನಿಯೆಂದು ಕರೆದುಕೊಳ್ಳುತ್ತೀರಿ. ಆದ್ರೆ, ನೀವು ಮತ್ತು ನಿಮ್ಮ ಕಾಂಗ್ರೆಸ್​ ಪಕ್ಷವನ್ನು ಜೆಡಿಎಸ್​ನ, ಅದರಲ್ಲೂ ಹೆಚ್.​​ಡಿ. ದೇವೇಗೌಡ ಮತ್ತು ಹೆಚ್​.ಡಿ. ಕುಮಾರಸ್ವಾಮಿಯವರ ಅಡಿಯಾಳಾಗಿ, ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಸರ್ಕಾರ ರಚಿಸಿದ್ದೀರಿ. ಇದು ಯಾವ ರೀತಿಯ ಸ್ವಾಭಿಮಾನ ಎಂದು ಬಿಎಸ್​ವೈ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಪ್ರಶ್ನಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv