ವರ್ಗಾವಣೆ ಈ ಸರ್ಕಾರದ ಒಂದು ದಂಧೆ: ಬಿಎಸ್​ವೈ ಆರೋಪ

ಯಾದಗಿರಿ: ರಾಜ್ಯದ ಅಭಿವೃದ್ಧಿ ಬಗ್ಗೆ ಸಮ್ಮಿಶ್ರ ಸರ್ಕಾರದ ಸಚಿವರು ಒಂದು ಮಾತೂ ಸಹ ಅಡುತ್ತಿಲ್ಲ. ಅಧಿಕಾರಿಗಳ ವರ್ಗಾವಣೆ ಈ ಸರ್ಕಾರದ ಒಂದು ದಂಧೆಯಾಗಿದೆ. ಇದ್ರಿಂದ ರಾಜ್ಯ ಅಭಿವೃದ್ಧಿ ಆಗುತ್ತಿಲ್ಲ ಅಂತಾ ವಿಪಕ್ಷ ನಾಯಕ ಬಿ.ಎಸ್.​ ಯಡಿಯೂರಪ್ಪ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ, ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬರಗಾಲ ಆವರಿಸಿದೆ. ಆದ್ರೆ ಸಿಎಂ ಅಗಲಿ, ಕೃಷಿ ಸಚಿವರಾಗಲಿ ಯಾವುದೇ ಜಿಲ್ಲೆಗೆ ಭೇಟಿ ನೀಡಿಲ್ಲ. ಕಳೆದ ಮೂರು ತಿಂಗಳಿಂದ ಸಾಲ ಮನ್ನಾದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದ್ರೆ ರೈತರಿಗೆ ಮಾತ್ರ ಇನ್ನೂ ಸಾಲಮನ್ನಾದ ಲಾಭ ಸಿಕ್ಕಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ‌ ಸಂಪೂರ್ಣ ಸ್ಥಗಿತವಾಗಿದೆ. ಇನ್ನು ಹೊಸದಾಗಿ ಕಾಮಗಾರಿ ಮಾಡಲು ಗುತ್ತಿಗೆದಾರರು ಮುಂದೆ‌ ಬರುತ್ತಿಲ್ಲ. ಇನ್ನು ಗುರುಮಠಕಲ್ ಮತಕ್ಷೇತ್ರದ ಕಡೇಚೂರ್ ಬಾಡಿಯಾಳದಲ್ಲಿ ಕೈಗಾರಿಕೆ ಆರಂಭಿಸಿಲ್ಲ. ವಡಗೇರಾ ತಾಲೂಕಿನ ಕೊನೆಭಾಗದ ರೈತರಿಗೆ‌ ಕಾಲುವೆ ಮುಖಾಂತರ ನೀರು ತಲುಪಿಸಲೂ ಆಗಿಲ್ಲ. ಜಿಲ್ಲೆಯಲ್ಲಿ ಇಂಜಿನಿಯರ್ ಕಾಲೇಜು, ವೈದ್ಯಕೀಯ ಕಾಲೇಜು ಸ್ಥಾಪಿಸಲು ಕೂಡಾ ಆಗಿಲ್ಲ ಅಂತಾ ಕಿಡಿಕಾರಿದ್ರು. ಪ್ರಧಾನಿ ಮೋದಿ ವಿಶ್ವವೇ ನೋಡುವಂತೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಸರ್ಕಾರದಲ್ಲಿ ದೇಶದ ಆರ್ಥಿಕ ಸ್ಥಿತಿ 6 ಸ್ಥಾನ ಏರಿಕೆ ಯಾಗಿದೆ. ದೇಶದಲ್ಲಿ‌ ಕಾಂಗ್ರೆಸ್ ವಿರುದ್ಧ ಎಲ್ಲಾ ಪಕ್ಷಗಳು ತಿರುಗಿಬಿದ್ದಿವೆ. ಲೋಕಸಭೆಯಲ್ಲಿಯೂ ನಮಗೆ ಹೆಚ್ಚು ಸ್ಥಾನಗಳು ಬರುತ್ತವೆ ಅಂತಾ ಬಿಎಸ್ ವೈ ಭವಿಷ್ಯ ನುಡಿದ್ರು.
ರಾಜ್ಯದ ಎರಡನೇ ರಾಜ್ಯಧಾನಿ ಹಾಸನ ಜಿಲ್ಲೆ..!
ಸಿಎಂ ಕುಮಾರಸ್ವಾಮಿ ಎರಡನೇ ರಾಜ್ಯಧಾನಿ ಹಾಸನ ಜಿಲ್ಲೆ ಅಂತಾ ತಿಳಿದು ಕೊಂಡಿದ್ದಾರಾ? ಏನೋ ಗೊತ್ತಿಲ್ಲ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅಭಿವೃದ್ಧಿ ಮಾಡಬೇಕೇ ಹೊರತು, ಕೆಲವೇ ಜಿಲ್ಲೆಗಳಿಗೆ ಅದು ಸೀಮಿತವಾಗಬಾರದು ಅಂತಾ ಕಿಡಿಕಾರಿದ್ರು.