ಅಣ್ಣನೇ ತಂಗಿಯನ್ನ ಕೊಲೆಗೈಯಲು ಯತ್ನಿಸಿದ್ದು ಯಾಕೆ?

ಹಾಸನ: ಆಸ್ತಿಗಾಗಿ ಅಣ್ಣ ತಮ್ಮಂದಿರು ಹೊಡೆದಾಡುವುದನ್ನು ನೋಡಿದ್ದೇವೆ. ಆದರೆ ಆಸ್ತಿಗಾಗಿ ಅಣ್ಣನೇ ತನ್ನ ತಂಗಿಯನ್ನ ಕೊಲೆಗೈಯಲು ಮುಂದಾಗಿರುವ ಕುಕೃತ್ಯ ನಡೆದಿರೋದು ಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ. ಆಸ್ತಿ ವೈಷಮ್ಯ ಹಿನ್ನೆಲೆಯಲ್ಲಿ ಅಣ್ಣನೇ ತಂಗಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಚಂದ್ರಶೇಖರ್ ಕೊಲೆಗೆ ಯತ್ನಿಸಿದ ಆರೋಪಿ. ಲತಾ ಎಂಬ ತನ್ನ ತಂಗಿಗೆ ಮೊದಲು ಕಾರಿಂದ ಡಿಕ್ಕಿ ಹೊಡೆಸಿದ ಅಣ್ಣ. ಆಕೆ ನೆಲಕ್ಕೆ ಬಿದ್ದ ಕೂಡಲೇ ಮುಖದ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಆಕೆಯನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಘಟನೆ ನಂತರ ಆರೋಪಿ ಪರಾರಿಯಾಗಿದ್ದು, ಈ ಸಂಬಂಧ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ್ದೇ ಮಾರಕವಾಯ್ತಾ?
ಕೆಲ ವರ್ಷಗಳ ಹಿಂದೆ ಅದೇ ಗ್ರಾಮದ ಪ್ರೇಮಾನಂದ್​ ಎಂಬುವರೊಂದಿಗೆ ಪ್ರೇಮ ವಿವಾಹವಾಗಿದ್ದ ಲತಾ ಆಗಿನಿಂದ‌ ತವರು ಮನೆಯವರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಇತ್ತೀಚೆಗಷ್ಟೇ ತಂದೆಯ ಆಸ್ತಿಯಲ್ಲಿ ಪಾಲುಬೇಕೆಂದು ಲತಾ ಕೋರ್ಟ್ ಮೆಟ್ಟಿಲೇರಿದ್ದಳು. ಈ ಹಿನ್ನೆಲೆಯಲ್ಲಿ ಕೋರ್ಟ್​ನಿಂದ ಚಂದ್ರಶೇಖರ್​ಗೆ ನೋಟಿಸ್ ಕೂಡ ಬಂದಿತ್ತು. ಇದರಿಂದ ಕುಪಿತಗೊಂಡ ಆತ ತಂಗಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv