ಕೊನೆಗೂ ವಿಕಿಲೀಕ್ಸ್​​ ಸಂಸ್ಥಾಪಕ ಅಸಾಂಜೆ ಅರೆಸ್ಟ್​, ಮುಂದೇನು?

ಲಂಡನ್​​: ಅತ್ಯಂತ ಕಾನ್ಫಿಡೆನ್ಶಿಯಲ್​​ ದಾಖಲೆಗಳನ್ನ ಲೀಕ್​ ಮಾಡಿ, ದೊಡ್ಡಣ್ಣ ಅಮೆರಿಕಾದ ಎದೆಯನ್ನೇ ನಡುಗಿಸಿದ್ದ ಗಟ್ಟಿಗ ಜೂಲಿಯನ್​ ಅಸಾಂಜೆ ಅವರನ್ನು ಕೊನೆಗೂ ಇಂದು ಬಂಧಿಸಲಾಗಿದೆ.

ವಿಕಿಲೀಕ್ಸ್​​ ಸಂಸ್ಥಾಪಕ ಜೂಲಿಯನ್​ ಅಸಾಂಜೆ ವರ್ಗೀಕೃತ ದಾಖಲೆಗಳನ್ನು ತಮ್ಮ ವಿಕಿಲೀಕ್ಸ್​​ ವೆಬ್​​ಸೈಟ್​​ ಮೂಲಕ ಬಹಿರಂಗಪಡಿಸಿದ್ದರು. ಈಕ್ವೆಡಾರ್​​ನ ರಾಯಭಾರ ಕಚೇರಿಯಲ್ಲಿ ಬ್ರಿಟೀಷ್​​ ಪೊಲೀಸರು ಇದೀಗ ಬಂಧಿಸಿದ್ದಾರೆ. 2012ರಿಂದಲೂ ಅವರು ಲಂಡನ್​​ನಲ್ಲಿರುವ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದುಕೊಂಡಿದ್ದರು.

ಬಂಧನ ಹೇಗೆ? ಯಾಕೆ?
ಜೂಲಿಯನ್​ ಅಸಾಂಜೆ ಲಂಡನ್​​ನಲ್ಲಿರುವ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ರಾಜಕೀಯ ಆಶ್ರಯ ಪಡೆದಿದ್ದರು. ಅದರೆ ಈಕ್ವೆಡಾರ್​​, ತಾನು ನೀಡಿದ್ದ ರಾಜಕೀಯ ಆಶ್ರಯವನ್ನು ಹಿಂತೆಗೆದುಕೊಂಡಿತ್ತು. ಆದರೂ ಅಸಾಂಜೆ, ಈಕ್ವೆಡಾರ್​​ ರಾಯಭಾರ ಕಚೇರಿಯಿಂದ ಹೊರಹೋಗಲಿಲ್ಲ. ಇದರಿಂದ ರಾಯಭಾರ ಕಚೇರಿಯವರು ಬ್ರಿಟೀಷ್​​ ಪೊಲೀಸರನ್ನೇ ತಮ್ಮ ಕಚೇರಿಗೆ ಆಹ್ವಾನಿಸಿ, ಆಸ್ಟ್ರೇಲಿಯಾ ಮೂಲದ ಜೂಲಿಯನ್​ ಅಸಾಂಜೆ  ಬಂಧನಕ್ಕೆ ಅನುವು ಮಾಡಿಕೊಟ್ಟರು. ಅಸಾಂಜೆ ವಿರುದ್ಧ 2012ರಲ್ಲಿ ಬ್ರಿಟನ್​ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ​ಸೆಂಟ್ರಲ್​ ಲಂಡನ್​ ಪೊಲೀಸರು ಅವರನ್ನೀಗ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಶೀಘ್ರದಲ್ಲೇ ವೆಸ್ಟ್​ಮಿನಿಸ್ಟರ್​​ ಮ್ಯಾಜಿಸ್ಟ್ರೇಟ್​​ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

ಮುಂದೇನು?
47 ವರ್ಷದ ಜೂಲಿಯನ್​ ಅಸಾಂಜೆಗೆ ಈಕ್ವೆಡಾರ್ ರಾಜಕೀಯ ಆಶ್ರಯ ಅಗತ್ಯವಾಗಿತ್ತು. ಇಲ್ಲವಾದಲ್ಲಿ ಅಮೆರಿಕಾದ ವರ್ಗೀಕೃತ ದಾಖಲೆಗಳನ್ನು ಲೀಕ್​ ಮಾಡಿದ್ದಕ್ಕೆ ಸೇಡಿನ ಕ್ರಮವಾಗಿ ಈಕ್ವೆಡಾರ್​ ಆಶ್ರಯದಿಂದ ಹೊರಹೋಗುತ್ತಿದ್ದಂತೆ ತನ್ನನ್ನು ಅಮೆರಿಕಾಕ್ಕೆ ಒಪ್ಪಿಸುವ ಹುನ್ನಾರ ಇದೆ ಎಂದು ಅಸಾಂಜೆ ಅಂದಿನಿಂದಲೂ ತಮ್ಮ ಅಳಲು ತೋಡಿಕೊಂಡಿದ್ದರು. ಇದೀಗ ಅಮೆರಿಕಾ ಸದ್ಯದಲ್ಲೇ ಜೂಲಿಯನ್​ ಅಸಾಂಜೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.