ಮುರುಕಲು ಸೇತುವೆ ಅಪಾಯದ ತೂಗುಗತ್ತಿಯಾಗಿದೆ ..!

ಕೊಡಗು: ಆಧುನಿಕತೆ ದಿನೇ ದಿನೆ ಬೆಳೆಯುತ್ತಿದೆ. ಜನ ಹೈಟೆಕ್ ಜೀವನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಜನರ ಜೀವನ ಶೈಲಿ ಕೂಡಾ ಬದಲಾಗುತ್ತಿದೆ. ಮಾತೆತ್ತಿದ್ರೆ ಅಭಿವೃದ್ಧಿ ಬಗ್ಗೆ ಭಾಷಣ ಬಿಗಿದು ಸೌಧ ಕಟ್ಟುವ ಜನಪ್ರತಿನಿಧಿಗಳೂ ನಮ್ಮ ಮಧ್ಯೆಯೇ ಇದ್ದಾರೆ. ಆದ್ರೆ ನಿತ್ಯದ ಜೀವನಕ್ಕಾಗಿ ಜನ ಪರದಾಡುವ ದುಸ್ಥಿತಿ ನಮ್ಮ ನಡುವೆ ಇದೆ. ದಕ್ಷಿಣ ಕಾಶ್ಮೀರ ಕೊಡಗು ಜಿಲ್ಲೆ ಕೂಡಾ ಇದರಿಂದ ಹೊರತಾಗಿಲ್ಲ.
ಮಡಿಕೇರಿ ತಾಲೂಕಿನ ಕರಿಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲತ್ತಿಕಡವು, ದೊಡ್ಡಚೇರಿ ನಿವಾಸಿಗಳ ಸ್ಥಿತಿ ನೋಡಿದ್ರೆ ಜಿಲ್ಲೆಯಲ್ಲಿ ಇಂತಹ ಗ್ರಾಮಗಳಿವೆಯಾ ಅಂತ ಅನಿಸುತ್ತೆ. ಆದ್ರೆ, ಈ ವಾಸ್ತವವನ್ನು ನಂಬಲೇಬೇಕು.
ಕೊಡಗು-ಕೇರಳ ಗಡಿ ಭಾಗದ ದೊಡ್ಡಚೇರಿ ಗ್ರಾಮದ ಜನ ಪ್ರತಿನಿತ್ಯ ಜೀವ ಕೈಯಲ್ಲಿಡಿದು ಬದುಕುತ್ತಾರೆ. ಅದಕ್ಕೆ ಕಾರಣ ಇಲ್ಲಿರುವ ಮುರುಕಲು ಸೇತುವೆ. ನದಿ ದಾಟೋವುದಕ್ಕಾಗಿ ಆಧುನಿಕ ಮಾದರಿ ಸೇತುವೆಗಳ ನಿರ್ಮಾಣ ಮಾಡುವ ವ್ಯವಸ್ಥೆಯಿದೆಯಾದ್ರೂ, ಇಲ್ಲಿನ ಜನರಿಗೆ ಮಾತ್ರ ಬಿದಿರು, ಮರದಿಂದ ಮಾಡಿದ ಪಾಲವೇ (ಕಾಲು ಸೇತುವೆಯೇ) ಗತಿ. ಬೇರೆ ಗ್ರಾಮಗಳಿಗೆ ರಸ್ತೆ ಮೂಲಕ ತೆರಳಬೇಕಾದ್ರೆ 6 ಕಿಮೀ ಸುತ್ತಿ ಬಳಸಿ ಸಾಗಬೇಕು. ಆದ್ರೆ ತೂಗು ಸೇತುವೆ ದಾಟಿದ್ರೆ ಕೆಲವೇ ನಿಮಿಷದಲ್ಲಿ ಕ್ರಮಿಸಬಹುದು.

ದುಸ್ಥಿತಿಗೆ ತಲುಪಿದ ತೂಗು ಸೇತುವೆ

ಶಾಲಾಮಕ್ಕಳಿಂದ, ಮಹಿಳೆಯರು, ಪುರುಷರು ಎಲ್ಲರೂ ಮುರುಕಲು ಸೇತುವೆ ಮೇಲೆ ನಡೆದು ನದಿ ದಾಟುತ್ತಾರೆ. ಹಲವು ದಶಕಗಳಿಂದ ಗ್ರಾಮಸ್ಥರು ಇದೇ ಸೇತುವೆಯನ್ನ ನಂಬಿಕೊಂಡಿದ್ದಾರೆ. ಕಳೆದ ಈ ಬಾರಿ ತೂಗು ಸೇತುವೆ ದುಸ್ಥಿತಿಗೆ ತಲುಪಿದ್ದು, ಚಂದ್ರಗಿರಿ ನದಿ ದಾಟೋದು ದೊಡ್ಡ ಸಾಹಸವೇ ಸರಿ ಎಂಬಂತಾಗಿದೆ. ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಈ ಭಾಗದ ಜನ ಮಕ್ಕಳನ್ನು ಶಾಲೆಗೆ ಕಳುಹಿಸೋದಕ್ಕೆ ಭಯ ಪಡುತ್ತಿದ್ದಾರೆ. ಹೊಸ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಕೆಯಾಗಿದ್ರು ಕೂಡಾ ಫಲಿತಾಂಶ ಮಾತ್ರ ಶೂನ್ಯ. ಇಂದಲ್ಲ ನಾಳೆಯಾದ್ರು ಹೊಸ ಸೇತುವೆ ನಿರ್ಮಾಣವಾಗಬಹುದೆಂಬ ಆಶಾಭಾವನೆ ಇಲ್ಲಿನ ಮುಗ್ಧ ಜನರದ್ದು. ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಾದ ತುರ್ತು ಅಗತ್ಯತೆ ಇದೆ. ಇನ್ನಾದ್ರು ಸೇತುವೆ ನಿರ್ಮಾಣಕ್ಕೆ ನಮ್ಮ ಆಡಳಿತ ವರ್ಗ ಮುಂದಾಗಬಹುದು ಅನ್ನೋ ನಿರೀಕ್ಷೆ ಎಲ್ಲರಲ್ಲಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv