ಮುಂಬೈನಲ್ಲಿ ಮತ್ತೊಂದು ಸೇತುವೆ ಕುಸಿತ..!

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೊಂದು ಸೇತುವೆ ಕುಸಿದು ಬಿದ್ದಿದೆ. ಮುಂಬೈನ ವಾಶಿ ಸಮೀಪವಿರುವ ಸಾಗರ್​ ವಿಹಾರ್​ ಬಳಿ ನಿನ್ನೆ ಸಾಯಂಕಾಲ ಪಾದಚಾರಿ ಸೇತುವೆ ಕುಸಿದು ಬಿದ್ದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 30 ವರ್ಷಗಳಷ್ಟು ಹಳೆಯದಾದ ಈ ಸೇತುವೆ, ಸೇಫ್ಟಿ ಆಡಿಟ್​ಗೆ ಒಳಪಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮುಂಬೈನಲ್ಲಿ ನಡೆಯುತ್ತಿರುವ ನಾಲ್ಕನೇ ಸೇತುವೆ ದುರಂತ ಇದಾಗಿದ್ದು, ಪಾಲಿಕೆ ನಿರ್ಲಕ್ಷ್ಯದ ವಿರುದ್ಧ ಜನತೆ ಕಿಡಿಕಾರುತ್ತಿದ್ದಾರೆ. ಕಳೆದ ತಿಂಗಳು ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದ ಸಮೀಪವಿರುವ ಪಾದಚಾರಿ ಸೇತುವೆ ಕುಸಿದು ಬಿದ್ದ ಪರಿಣಾಮ, 7 ಜನ ಸಾವನ್ನಪ್ಪಿದ್ರೆ, 30ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.