ಸಂಸದ ಪ್ರಹ್ಲಾದ ಜೋಶಿ ವಿರುದ್ಧ ನೀತಿಸಂಹಿತೆ ಉಲ್ಲಂಘನೆ ಆರೋಪ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಹಾಲಿ ಬಿಜೆಪಿ ಸಂಸದ ಪ್ರಹ್ಲಾದ ಜೋಶಿಯವರು ಸರ್ಕಾರಿ ಜಾಗದಲ್ಲಿ ಪಕ್ಷದ ಪ್ರಚಾರ ವಾಹನವನ್ನು ಪಾರ್ಕಿಂಗ್ ಮಾಡಿ, ಸರ್ಕಾರಿ ಜಾಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಲೊಕಸಭಾ ಚುನಾವಣೆಯ ಬಿಜೆಪಿಯ ಪ್ರಚಾರಕ್ಕೆ ಬಂದ ವಾಹನವನ್ನು, ಹುಬ್ಬಳ್ಳಿಯ ಪಾಲಿಕೆಯ ಆವರಣದಲ್ಲಿರುವ ಸಂಸದರ ಕಚೇರಿ ಮುಂಭಾಗದಲ್ಲಿ ನಿಲ್ಲಿಸಿ, ಮಾದರಿ ನೀತಿ ಸಂಹಿತೆ ಉಲಂಘನೆ ಮಾಡಲಾಗಿದೆಯಂತೆ. ಅಲ್ಲದೆ ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಪ್ರಚಾರ ವಾಹನ ಹಾಗೂ ಸರ್ಕಾರಿ ಕಚೇರಿಗಳನ್ನು ಬಳಕೆ ಮಾಡದಂತೆ ಕೇಂದ್ರ ಚುನಾವಣೆ ಆಯೋಗ ಆದೇಶ ಹೊರಡಿಸಿದ್ದರೂ ಅದನ್ನು ಸಂಪೂರ್ಣವಾಗಿ ಸಂಸದರು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ. ಕೂಡಲೇ ಸರ್ಕಾರಿ ಜಾಗದಲ್ಲಿ ನಿಲ್ಲಿಸಲಾಗಿರುವ ಬಿಜೆಪಿಯ ಪ್ರಚಾರ ವಾಹನವನ್ನು ಜಿಲ್ಲಾ ಚುನಾವಣೆ ಅಧಿಕಾರಿಗಳು ವಶಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯ ಮಾಡಿದ್ದಾರೆ. ಕೆಲವು ದಿನಗಳಿಂದ ಸರ್ಕಾರಿ ಕಟ್ಟಡದ ಆವರಣದಲ್ಲಿ ಪ್ರಚಾರದ ವಾಹನ ಪಾರ್ಕಿಂಗ್ ಮಾಡಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗಿದ್ರು ಅಧಿಕಾರಿಗಳು ಮಾತ್ರ ಸುಮ್ಮನಿರುವುದು ಹಲವು ಅನುಮಾನಗಳನ್ನು ಮೂಡಿಸುತ್ತಿವೆ ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv   Twitter: firstnews.tv