ಅವನ ಕೊಂದ.. ತಾನೇ ಸತ್ತನೆಂದು ಹೇಳಿದ.. ಕೊನೆಗೆ ತಗ್ಲಾಕೊಂಡ.!

ಹುಬ್ಬಳ್ಳಿ: ವ್ಯಕ್ತಿಯೊಬ್ಬ 50 ಲಕ್ಷ ರೂಪಾಯಿ ಜೀವವಿಮೆ ಆಸೆಗಾಗಿ ಯುವಕನೊಬ್ಬನನ್ನು ಕೊಲೆ ಮಾಡಿ, ಅಫಘಾತದಲ್ಲಿ ತಾನೇ ಸತ್ತಿರುವುದಾಗಿ ಡ್ರಾಮಾ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಮಂಗಳವಾರ ತಡರಾತ್ರಿ ಹುಬ್ಬಳ್ಳಿಯ ರೇವಡಿ ಹಾಳ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದ್ದ ಎನ್​. ಸಂಜೀವಕುಮಾರ್, ಬೆಂಗೇರಿ ತನ್ನ ಹೆಸರಿನಲ್ಲಿ ಎಚ್​​​ಡಿ ಎಫ್​​​​​​​​ಸಿ ಬ್ಯಾಂಕ್​​​​​​​ನಲ್ಲಿ ವಿಮೆ ಹೊಂದಿದ್ದ. ಆದ್ರೆ ಆ ಹಣ ಪಡೆಯಬೇಕು ಎಂಬ ದುರಾಸೆಯಿಂದ ಬೇರೊಬ್ಬ ವ್ಯಕ್ತಿಯೊಬ್ಬನ್ನು ಕೊಲೆ ಮಾಡಿದ್ದ. ತಾನು ಹಾಕಿಕೊಂಡ ಡ್ರೆಸ್ ಕೊಲೆಯಾದ ವ್ಯಕ್ತಿಗೆ ತೊಡಿಸಿ ತನ್ನ ಬೈಕ್​​ ಮೇಲೆ ಶವ ಹಾಕಿ ರಸ್ತೆ ಅಪಘಾತದಲ್ಲಿ ತಾನೇ ಸತ್ತಿರುವಂತೆ ಸೀನ್​ ಕ್ರಿಯೇಟ್​ ಮಾಡಿದ್ದ. ಈ ಅಪಘಾತದ ಸುದ್ದಿ ಮನೆಯವರಿಗೆ ತಲುಪಿದ ಬಳಿಕ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇನ್ನು ಪೊಲೀಸರು ಸಹ ಸತ್ತ ವ್ಯಕ್ತಿಯನ್ನು ಸಂಜೀವಕುಮಾರ್ ಬೆಂಗೇರಿ ಎಂದೇ ತಿಳಿದುಕೊಂಡಿದ್ದರು . ಆದ್ರೆ ಸಹೋದರ ಮಂಜುನಾಥ್ ಬೇಂಗೇರಿ ತನ್ನ ಅಣ್ಣನ ಕೈ ಮೇಲೆ ಶ್ರೀರಾಮನ ಹಚ್ಚೆ ಇರುವುದಾಗಿ ಹೇಳಿ ಗೋಕುಲ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದ. ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡ ಪೊಲೀಸರು, ಶವ ಪರಿಕ್ಷೆ ಮಾಡಿದಾಗ ಕೈ ಮೇಲೆ ಯಾವುದೇ ಹಚ್ಚೆ ಇರಲಿಲ್ಲ, ಅಲ್ಲದೇ ಅದೊಂದು ಬೇರೊಬ್ಬ ವ್ಯಕ್ತಿಯ ಶವ ಎಂಬುದು ಗೊತ್ತಾಗಿದೆ. ಅಲ್ಲದೇ, ತನಿಖೆ ವೇಳೆ ಹಣ ಹೊಡೆಯಲು ಸಂಜೀವಕುಮಾರ ಆ್ಯಂಡ್ ಟೀಂ ಮಾಡಿರುವ ಡ್ರಾಮಾ ಎಂಬುವುದು ಈಗ ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಗೋಕುಲ್ ರೋಡ್​​​ ಠಾಣೆಯ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಂತೇಶ ದುಗ್ಗಾಣಿ ಹಾಗೂ ಅಮೀರ್ ಶೇಖ್​​​​​ರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಕರಣದ ಪ್ರಮುಖ ಆರೋಪಿ ಸಂಜೀವಕುಮಾರ್ ಬೆಂಗೇರಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಅಲ್ಲಿ ನಿಜವಾಗಲೂ ‌ಕೊಲೆಯಾದ ವ್ಯಕ್ತಿ ಯಾರು ಎಂಬುವುದರ ಕುರಿತು ತನಿಖೆ ಕೈಗೊಂಡಿದ್ದಾರೆ. ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್​​ ಸಿಕ್ಕಿದೆ. ಕೊಲೆಯಾದ ವ್ಯಕ್ತಿಯನ್ನು ಬಾಗಲಕೋಟೆ ಮೂಲದ ಮಹ್ಮದ ಇರ್ಪಾನ್ ನದಾಪ್ ಎಂದು ಗುರುತಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv