ರಫೇಲ್​ ವ್ಯವಹಾರದಲ್ಲಿ ಸುಳ್ಳಿನ ‘ರಾಗಾ’…!

ರಫೇಲ್​ ವಿವಾದಕ್ಕೆ ಸುಪ್ರೀಂಕೋರ್ಟ್​ ನಾಂದಿ ಹಾಡಿದ್ರೂ, ರಾಜಕೀಯ ವಲಯದಲ್ಲಿ ಪ್ರಕರಣ ಇನ್ನೂ ಜೀವಂತವಾಗಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಫೇಲ್​​ ವಾರ್​ ಜೋರಾಗ್ತಿದೆ. ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ರಫೇಲ್ ವಾಕ್ಸಮರ ಮುಂದುವರಿದಿದ್ದು, ಬಿಜೆಪಿ ರಾಹುಲ್​​ ಗಾಂಧಿಯ ಸುಳ್ಳಿನ ಸರಮಾಲೆ ಬಿಚ್ಚಿಟ್ಟಿದೆ. ರಫೇಲ್ ಡೀಲ್ ವಿಚಾರವಾಗಿ ರಾಹುಲ್ ಗಾಂಧಿ ಒಂದರ ಹಿಂದೊಂದು ಸುಳ್ಳು ಹೇಳಿದ್ದಾರಂತೆ. ಸುಳ್ಳಿನ ಮೂಲಕವೇ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದ್ದು, ರಾಹುಲ್​ ಹೇಳಿರುವ 10 ಸುಳ್ಳುಗಳ ಪಟ್ಟಿಯನ್ನ ಟ್ವೀಟರ್​ನಲ್ಲಿ ಬಹಿರಂಗಪಡಿಸಿದೆ.

ರಾಹುಲ್ ಹೇಳಿದ ಸುಳ್ಳು ನಂಬರ್ 1
ರಫೇಲ್ ಡೀಲ್ ಕುದುರಿಸಲು ಡಸ್ಸಾಲ್ಟ್ ಕಂಪನಿ ರಿಲಯನ್ಸ್ ಕಂಪನಿಯನ್ನು ಆಫ್ಸೆಟ್ ಪಾರ್ಟನರ್ ಅನ್ನಾಗಿ ಮಾಡಿಕೊಂಡಿತ್ತು ಎಂದು ರಾಹುಲ್ ತಿರುಚಿ ಹೇಳಿದ್ದರು. ಆದ್ರೆ ಇದರಲ್ಲಿ ಕೇಂದ್ರದ ಯಾವುದೇ ಕೈವಾಡ ಇಲ್ಲ ಅಂತಾ ಕೋರ್ಟ್ ಹೇಳಿದೆ.

ರಾಹುಲ್ ಹೇಳಿದ ಸುಳ್ಳು ನಂಬರ್ 2
ರಫೇಲ್ ಡೀಲ್ ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಸರ್ವೋಚ್ಚ ನ್ಯಾಯಾಲಯವೇ ಕಂಡುಕೊಂಡಿದೆ ಎಂದು ಬಿಂಬಿಸಲು ರಾಹುಲ್​​ ಗಾಂಧಿ ಪ್ರಯತ್ನಿಸಿದ್ರು. ಆದ್ರೆ ಕೋರ್ಟೇ ಆ ಅರ್ಜಿಯನ್ನ ವಜಾಗೊಳಿಸಿದೆ.

ರಾಹುಲ್ ಹೇಳಿದ ಸುಳ್ಳು ನಂಬರ್ 3
ರಫೇಲ್ ಡೀಲ್ ಬಗ್ಗೆ ವಿರೋಧಿಸಿದ ರಕ್ಷಣಾ ಇಲಾಖೆಯ ಅಧಿಕಾರಿಯನ್ನು ಕೇಂದ್ರ ಶಿಕ್ಷಿಸಿದೆ ಎಂದು ರಾಹುಲ್ ಸುಳ್ಳು ಹೇಳಿದ್ದರು. ಆದ್ರೆ ಆ ಅಧಿಕಾರಿಯೇ ನನಗೆ ಯಾರೂ ಶಿಕ್ಷೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ರು.

ರಾಹುಲ್ ಹೇಳಿದ ಸುಳ್ಳು ನಂಬರ್ 4
ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲ್ಲಾಂಡೆ, ಪ್ರಧಾನಿ ಮೋದಿ ಅವರನ್ನು ಕಳ್ಳ ಎಂದಿದ್ರಂತೆ. ಆದ್ರೆ ಈ ಆರೋಪವನ್ನು ಸ್ವತಃ ಹೊಲ್ಲಾಂಡೆ ನಿರಾಕರಿಸಿದ್ದಾರೆ.

ರಾಹುಲ್ ಹೇಳಿದ ಸುಳ್ಳು ನಂಬರ್ 5
ಸಂಸತ್ತಿನಲ್ಲಿ ಕೂಡ ರಾಹುಲ್ ಗಾಂಧಿ ಸುಳ್ಳು ಹೇಳಿದ್ದರು. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್, ಖರೀದಿಯ ಮೌಲ್ಯ ಬಹಿರಂಗ ಪಡಿಸಬಾರದು ಎಂದು ಯಾವುದೇ ನಿಯಮ ಇಲ್ಲ ಎಂದಿದ್ರಂತೆ. ಆದ್ರೆ ಇದನ್ನ ಫ್ರಾನ್ಸ್ ಸರ್ಕಾರ ಅಲ್ಲಗೆಳೆದಿತ್ತು.

ರಾಹುಲ್ ಹೇಳಿದ ಸುಳ್ಳು ನಂಬರ್ 6
ಯುಪಿಎ ಅವಧಿಯಲ್ಲಿ ಡೀಲ್ ಕುದುರಿಸಿದಾಗ ನಿಗದಿಪಡಿಸಿದ್ದ ಯುದ್ಧ ವಿಮಾನದ ಮೌಲ್ಯವನ್ನು ಬೇರೆ ಬೇರೆ ಸ್ಥಳಗಳಲ್ಲಿ ಬೇರೆಬೇರೆ ರೀತಿ ಹೇಳಿದ್ದರು. ಹೀಗೆ ಸುಳ್ಳು ಹೇಳಿದ್ದಕ್ಕೆ ರಾಹುಲ್ ಗಾಂಧಿಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಬಿಜೆಪಿ ವ್ಯಂಗ್ಯವಾಡಿದೆ.

ರಾಹುಲ್ ಹೇಳಿದ ಸುಳ್ಳು ನಂಬರ್ 7
ರಫೇಲ್ ಖರೀದಿ​​ ಪ್ರಕ್ರಿಯೆಯನ್ನು ಮೋದಿ ಸರ್ಕಾರ ಉಲ್ಲಂಘಿಸಿದೆ ಎಂದು ರಾಹುಲ್ ಗಾಂಧಿ ಸುಳ್ಳು ಹೇಳಿದ್ದರು. ಆದ್ರೆ ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕೋರ್ಟ್ ಹೇಳಿದೆ.

ರಾಹುಲ್ ಹೇಳಿದ ಸುಳ್ಳು ನಂಬರ್ 8
ಯುಪಿಎ, ರಫೇಲ್ ವಿಮಾನವೊಂದಕ್ಕೆ 540 ಕೋಟಿ ರುಪಾಯಿ ನಿಗದಿಪಡಿಸಿತ್ತು. ಆದರೆ, ಎನ್‌ಡಿಎ ಸರಕಾರ ಜೆಟ್ ವಿಮಾನವೊಂದಕ್ಕೆ  ₹1,600 ನಿಗದಿಪಡಿಸಿದೆ ಎಂದು ದೂರಿದ್ದರು. ಆದ್ರೆ ಎನ್‌ಡಿಎ ನಿಗದಿಪಡಿಸಿದ ಬೆಲೆ ಯುಪಿಎ ನಿಗದಿಪಡಿಸಿದ್ದಕ್ಕಿಂತ ಶೇ.9ರಷ್ಟು ಕಡಿಮೆಯಿದೆ

ರಾಹುಲ್ ಹೇಳಿದ ಸುಳ್ಳು ನಂಬರ್ 9
ರಾಜಕೀಯ ಲಾಭಕ್ಕಾಗಿ ಕೇಂದ್ರ 36 ರಫೇಲ್ ಯುದ್ಧ ವಿಮಾನ ಖರೀದಿಸುವ ನಿರ್ಧಾರ ಮಾಡಿದ್ದು, ವಾಯು ಸೇನೆಗೆ ಹಾನಿಯುಂಟಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದ್ರೆ ಕೇಂದ್ರ ಉತ್ತಮ ನಿರ್ಧಾರ ಕೈಗೊಂಡಿದೆ ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಹುಲ್ ಹೇಳಿದ ಸುಳ್ಳು ನಂಬರ್ 10
ಫೆಬ್ರವರಿ 8ರಂದು ರಾಹುಲ್ ಗಾಂಧಿಯವರು ದಿ ಹಿಂದೂ ಎಂಬ ಮತ್ತೊಬ್ಬ ಸುಳ್ಳುಗಾರನನ್ನು ಕಂಡುಕೊಂಡಿದ್ದಾರೆ. ಬೇಕಾದ ಹಾಗೆ ಕ್ರಾಪ್ ಮಾಡಿದ ದಾಖಲೆಯನ್ನು ಹಿಡಿದು ಮತ್ತೆ ಸುಳ್ಳು ಹೇಳಲು ಯತ್ನಿಸಿದ್ದಾರೆ. ಆದ್ರೆ ಸತ್ಯ ಸಂಗತಿ ಏನಂದ್ರೆ, ಕಾಂಗ್ರೆಸ್ಸಿಗರು ಫೋಟೋಶಾಪರ್ಸ್ ಅನ್ನೋದು ಗೊತ್ತು ಎಂದು ಬಿಜೆಪಿ ಕುಹಕವಾಡಿದೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv