ಈ ಕೇಸ್​​ನಲ್ಲಿ ಹೋರಾಡ್ತೀನಿ, ಖಂಡಿತ ಕ್ಷಮೆ ಕೇಳಲ್ಲ: ಪ್ರಿಯಾಂಕಾ ಶರ್ಮಾ

ಕೊಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನ ಟ್ರೋಲ್​ ಮಾಡುವ​ ಫೋಟೋ ಹಾಕಿದ್ದಕ್ಕೆ ಬಂಧಿತರಾಗಿದ್ದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ ಇಂದು ಬಿಡುಗಡೆಯಾಗಿದ್ದಾರೆ. ನಿನ್ನೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದರಿಂದ ​ ತಕ್ಷಣವೇ ರಿಲೀಸ್​ ಮಾಡಬೇಕಿತ್ತು. ಆದರೂ ಅಧಿಕಾರಿಗಳು ತಡವಾಗಿ ರಿಲೀಸ್​ ಮಾಡಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.

ಬಿಡುಗಡೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪ್ರಿಯಾಂಕಾ, ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ರು. ಮೊದಲಿಗೆ ಪ್ರಿಯಾಂಕಾ ಕ್ಷಮಾಪಣಾ ಪತ್ರ ಬರೆದುಕೊಡಬೇಕು ಎಂದು ಷರತ್ತು ಹಾಕಿ ಜಾಮೀನು ನೀಡಿದ್ದ ಕೋರ್ಟ್,​ ನಂತರದಲ್ಲಿ ಆದೇಶ ಮಾರ್ಪಡಿಸಿ, ಕ್ಷಮೆ ಕೇಳೋದು ಬೇಡ ಎಂದಿತ್ತು. ಆದ್ರೂ ನನ್ನಿಂದ ಬಲವಂತವಾಗಿ ಕ್ಷಮಾಪಣಾ ಪತ್ರ ಬರೆಸಿಕೊಂಡಿದ್ದಾರೆ. ಬಾಂಡ್​ಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ರು.

ನನಗೆ ಜೈಲಿನಲ್ಲಿ ಕಿರುಕುಳ ನೀಡಿದ್ರು, ಕರೆ ಮಾಡಲು ಬಿಡುತ್ತಿರಲಿಲ್ಲ. ಸುಪ್ರೀಂ ಕೋರ್ಟ್​ ಆದೇಶದ ಹೊರತಾಗಿಯೂ 18 ಗಂಟೆ ಜೈಲಿನಲ್ಲಿರಿಸಿದ್ದಾರೆ. ಜೈಲಿನೊಳಗೆ ಸರಿಯಾಗಿ ನೀರೇ ಇರಲಿಲ್ಲ, ಸ್ವಚ್ಛತೆಯೂ ಇರಲಿಲ್ಲ ಎಂದು ಪ್ರಿಯಾಂಕಾ ದೂರಿದರು. ನಾನು ಬಿಜೆಪಿಯವಳು ಅನ್ನೋ ಕಾರಣಕ್ಕೆ ಕ್ಷಮೆ ಕೇಳಬೇಕು ಎನ್ನುತ್ತಿದ್ದಾರೆ. ನನ್ನನ್ನು ಬೆದರಿಸಲು ಹೀಗೆ ಮಾಡ್ತಿದ್ದಾರೆ. ಆದ್ರೆ ನಾನು ಈಗ ಖಂಡಿತ ಹೆದರಲ್ಲ ಎಂದರು.

ಇನ್ನು ಇದೇ ವೇಳೆ ಮಾತನಾಡಿದ ಪ್ರಿಯಾಂಕಾ ಪರ ವಕೀಲ, ಪ್ರಿಯಾಂಕಾರಿಂದ ಬಲವಂತವಾಗಿ ಕ್ಷಮಾಪಣಾ ಪತ್ರ ಬರೆಸಿಕೊಂಡು ಕೋರ್ಟ್​ ಆದೇಶ ಉಲ್ಲಂಘಿಸಿದ್ದಾರೆ. ಕೊಲ್ಕತ್ತಾದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ನಾವು ಈ ಪ್ರಕರಣದ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv