ಪಕ್ಷಕ್ಕಾಗಿ ಮೃತಪಟ್ಟ ಪ.ಬಂ ಕಾರ್ಯಕರ್ತರ ಕುಟುಂಬಕ್ಕೂ ಪ್ರಮಾಣವಚನ ಕಾರ್ಯಕ್ರಮಕ್ಕೆ ಮೋದಿ ಆಹ್ವಾನ!

ದೆಹಲಿ: ರಾಷ್ಟ್ರರಾಜಧಾನಿಯಲ್ಲಿನ ರಾಷ್ಟ್ರಪತಿ ಭವನದಲ್ಲಿ ಮೇ 30ರಂದು ನರೇಂದ್ರ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ದೇಶ, ವಿದೇಶಗಳ ಅಧ್ಯಕ್ಷರು, ಮುಖ್ಯಮಂತ್ರಿಗಳು ಸೇರಿದಂತೆ 6500ಕ್ಕೂ ಅಧಿಕ ಗಣ್ಯಾತಿಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ. ಇಂಥ ಭವ್ಯ ಹಾಗೂ ಉನ್ನತ ಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮಬಂಗಾಳದ 54 ಸಾಮಾನ್ಯ ಬಿಜೆಪಿ ಕಾರ್ಯಕರ್ತರ ಕುಟುಂಸ್ಥರಿಗೆ ಆಹ್ವಾನ ನೀಡಿ ಸರಪ್ರೈಸ್ ನೀಡಿದ್ದಾರೆ.

ಅಷ್ಟಕ್ಕೂ ಯಾರು ಈ 54 ಕುಟುಂಬಸ್ಥರು ಅಂದ್ರೆ, ಇವರು ಪಶ್ಚಿಮ ಬಂಗಾಳದಲ್ಲಿ ನಡೆದ ರಾಜಕೀಯ ಹಿಂಸಾಚಾರದಲ್ಲಿ ಮೃತಪಟ್ಟ  ಬಿಜೆಪಿಯ ಸಾಮಾನ್ಯ ಕಾರ್ಯಕರ್ತರ ಕುಟುಂಬಸ್ಥರು. ಹೌದು, ಹೀಗೆ ಪಕ್ಷಕ್ಕಾಗಿ ತಮ್ಮ ಪ್ರಾಣ ತ್ಯಜಿಸಿದ ಕಾರ್ಯಕರ್ತರ ಕುಟುಂಬಸ್ಥರಿಗೆ ಪ್ರಧಾನಿ ಮೋದಿ ತಾವೇ ಮುತುವರ್ಜಿ ವಹಿಸಿ ಸ್ವತಃ ವಿಶೇಷ ಆಹ್ವಾನ ನೀಡಿದ್ದಾರೆ ಅಂತಾ ಪಶ್ಚಿಮ ಬಂಗಾಳ ಬಿಜೆಪಿ ತಿಳಿಸಿದೆ.

ಹಿಂಸಾಚಾರದಲ್ಲಿ ಮೃತಪಟ್ಟ ಮನು ಹಂಸ್ದಾ ಅನ್ನೋ ಬಿಜೆಪಿ ಕಾರ್ಯಕರ್ತರ ಮಗ, ಪ್ರಧಾನಿ ಆಹ್ವಾನಕ್ಕೆ ಖುಷಿ ವ್ಯಕ್ತಪಡಿಸಿದ್ದು. ‘ಸದ್ಯ ನಮ್ಮ ಏರಿಯಾದಲ್ಲಿ ಶಾಂತಿ ನೆಲೆಸಿದೆ. ನನ್ನ ತಂದೆ ಟಿಎಂಸಿ ಗೂಂಡಾಗಳಿಂದ ಮೃತಪಟ್ರು. ನಾವು ಪ್ರಧಾನಿ ಪ್ರಮಾಣವಚನ ಕಾರ್ಯಕ್ರಮಕ್ಕೆ ದೆಹಲಿಗೆ ಹೋಗುತ್ತಿರುವುದು ಖುಷಿ ತಂದಿದೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಮಾಣವಚನ ಕಾರ್ಯಕ್ರಮಕ್ಕೆ ಬಂಗಾಳ ಕೊಲ್ಲಿಯ BIMSTEC ರಾಷ್ಟ್ರಗಳ ಮುಖಂಡರನ್ನು ಆಹ್ವಾನಿಸಲಾಗಿದೆ. ಇವುಗಳ ಜೊತೆಗೆ, ಮಾರಿಷಸ್ ಮತ್ತು ಕಿರ್ಗಿಸ್ತಾನ್ ದೇಶಗಳ ಪ್ರಧಾನಿಗಳೂ  ಮೋದಿ ಪದಗ್ರಹಣಕ್ಕಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಹಲವು ದೇಶಗಳ ಮುಖ್ಯಸ್ಥರು, ನಾಯಕರು, ದಿಗ್ಗಜರು ಭಾಗವಹಿಸುತ್ತಿರುವ ಕಾರ್ಯಕ್ರಮಕ್ಕೆ ಪಕ್ಷಕ್ಕಾಗಿ ಕೆಲಸ ಮಾಡಿ ಮೃತಪಟ್ಟ ಸಾಮಾನ್ಯ ಕಾರ್ಯಕರ್ತರ ಕುಟುಂಬದ ಸದಸ್ಯರಿಗೂ ಆಹ್ವಾನವಿತ್ತಿದ್ದು ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಹಾಗೂ ಬಸಿರ್‌ಹಾಟ್ ಕ್ಷೇತ್ರದ ಹಲವು ಮತಗಟ್ಟೆಗಳಲ್ಲಿ ವ್ಯಾಪಕ ಹಿಂಸಾಚಾರಗಳು ನಡೆದಿದ್ದವು. ಚುನಾವಣೆಯ ಕೊನೆಯ ಹಂತದಲ್ಲೂ ಪಶ್ಚಿಮ ಬಂಗಾಳದ ಹಲವೆಡೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದು 54 ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ರು. ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ 22 ಸ್ಥಾನಗಳನ್ನು ಟಿಎಂಸಿ ಪಕ್ಷ ಗೆದ್ದರೆ 18 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv