ಆರು ವಿಧಾನಪರಿಷತ್ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ: ಬಿಎಸ್​ವೈ

ಶಿವಮೊಗ್ಗ: ರಾಜ್ಯದಲ್ಲಿ ನಡೆಯುತ್ತಿರುವ ಆರು ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಆರೂ ಕ್ಷೇತ್ರಗಳಲ್ಲಿ ನೂರಕ್ಕೆ ನೂರು ಗೆಲ್ಲಲಿದೆ ಅಂತಾ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

​ಶಿವಮೊಗ್ಗ, ಶಿಕಾರಿಪುರ, ಸಾಗರ, ರಿಪ್ಪನ್ ಪೇಟೆ, ಆಯನೂರಿನಲ್ಲಿ ಆಯನೂರು ಮಂಜುನಾಥ್ ಹಾಗೂ ಗಣೇಶ್ ಕಾರ್ಣಿಕ್ ಪರವಾಗಿ ಪ್ರಚಾರ ನಡೆಸುತ್ತಿರುವ ಬಿಎಸ್​ವೈ, ಇಂದು ನಗರದಲ್ಲಿ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಭ್ರಷ್ಟ ಸರ್ಕಾರವನ್ನು ನೋಡಿದ ಪ್ರಜ್ಞಾವಂತ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಅಂತಾ ಹೇಳಿದ್ರು. ಈ ವೇಳೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ತಾನು ಅದೃಷ್ಟದ ಮುಖ್ಯಮಂತ್ರಿ‌, ರಾಜ್ಯದ ಜನತೆ ಆಯ್ಕೆ ಮಾಡಿದ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಮತದಾರರನ್ನು ಅಪಮಾನ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಕೂಡಲೇ ರಾಜ್ಯದ ಜನರ ಕ್ಷಮೆಯನ್ನು ಯಾಚಿಸಬೇಕು ಅಂತಾ ಹೇಳಿದ್ರು.

ರೈತರ ಸಾಲ ಮನ್ನ ವಿಚಾರವಾಗಿ ಮಾತನಾಡಿದ ಬಿಎಸ್​ವೈ, ಅಪ್ಪ ಮಕ್ಕಳು ಸೇರಿ ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ ಅಂತಾ ಆರೋಪಿಸಿದ್ರು. ಇನ್ನು ಇಪ್ಪತ್ತು ದಿನ ಕಾಯುತ್ತೇನೆ, ಯೋಜನೆ ಹೇಗೆ ಅನುಷ್ಠಾನಗೊಳಿಸುತ್ತಾರೆ ಎಂಬುದನ್ನು ನೋಡಿ ಬಳಿಕ ಹೋರಾಟದ ರೂಪುರೇಷೆ ರೂಪಿಸುತ್ತೇನೆ ಅಂತಾ ಹೇಳಿದ್ರು.

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಮಲ್ ಹಾಸನ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅವರು ಯಾರು ಯಾರನ್ನೂ ಬೇಕಾದರೂ ಭೇಟಿ ಮಾಡಬಹುದು. ಅದು ಅವರಿಗೆ ಬಿಟ್ಟಿದ್ದು. ನಮ್ಮಲ್ಲಿ ಚೆನ್ನಾಗಿ ಮಳೆಯಾಗುತ್ತಿದೆ. ಕೆಆರ್​ಎಸ್ ಜಲಾಶಯದ ಮಟ್ಟ ನೋಡಿಕೊಂಡು ಟ್ರಿಬ್ಯುನಲ್ ತೀರ್ಮಾನದಂತೆ ನೀರು ಬಿಡಲು ತೊಂದರೆಯಿಲ್ಲ ಅಂತಾ ಹೇಳಿದ್ರು.

ಕಾಂಗ್ರೆಸ್ ಜೆಡಿಎಸ್ ಅವರು ಈಗಾಗಲೇ ಬಡಿದಾಡಿಕೊಳ್ಳುತಿದ್ದಾರೆ. ಅದನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಗೌರವವಿದ್ದಲ್ಲಿ ಸರ್ಕಾರ ವಜಾ ಮಾಡಿ ಜನರ ಮುಂದೆ ಬರಲಿ ಎಂದು ಬಿ.ಎಸ್.ಯಡಿಯೂರಪ್ಪ ​ಸವಾಲು ಹಾಕಿದ್ರು.