ಬಿಎಸ್​ವೈ ನೇತೃತ್ವದಲ್ಲಿ ನಡೆದ ಬಿಜೆಪಿ ಸಭೆ ಬಳಿಕ ಅರವಿಂದ ಲಿಂಬಾವಳಿ ಹೇಳಿದ್ದೇನು?

ಬೆಂಗಳೂರು: ಬಿಜೆಪಿ 22 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಇಂದು ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಅವರು ಮಾತನಾಡಿದ್ರು. ಸಭೆಯಲ್ಲಿ ಲೋಕಸಭಾ ಚುನಾವಣೆಯ ಶೇಕಡಾವಾರು ಮತದಾನದ ಬಗ್ಗೆ ಚರ್ಚೆ ನಡೆಸಲಾಗಿದೆ. ಲೋಕಸಭಾ ಚುನಾವಣೆಯ ಪರಾಮರ್ಶೆ ಮಾಡಲಾಗಿದೆ ಎಂದು ಲಿಂಬಾವಳಿ ತಿಳಿಸಿದ್ರು.

ಬಿಜೆಪಿ 22 ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಮೇ ಮೊದಲನೇ ವಾರದಲ್ಲಿ ರಾಜ್ಯದ ಮುಖಂಡರು ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ರಿವ್ಯೂ ಮೀಟಿಂಗ್ ಮಾಡಬೇಕು ಅಂತಾ ತೀರ್ಮಾನ ಮಾಡಲಾಗಿದೆ. ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳ ಉಪಚುನಾವಣೆ ಬಗ್ಗೆ ಎರಡೂ ಕ್ಷೇತ್ರಗಳ ಮುಖಂಡರ ಅಭಿಪ್ರಾಯ ಪಡೆಯಲಾಗಿದೆ ಎಂದರು. ಕುಂದಗೋಳ ಕ್ಷೇತ್ರಕ್ಕೆ ಉಸ್ತುವಾರಿಗಳಾಗಿ ಜಗದೀಶ್ ಶೆಟ್ಟರ್, ಈಶ್ವರಪ್ಪ, ಪ್ರಹ್ಲಾದ್​ ಜೋಷಿ ಮತ್ತು ಗೋವಿಂದ ಕಾರಜೋಳರನ್ನ ನೇಮಿಸಲಾಗಿದೆ. ಹಾಗೇ ಚಿಂಚೋಳಿ ಕ್ಷೇತ್ರಕ್ಕೆ ಉಸ್ತುವಾರಿಗಳಾಗಿ ವಿ. ಸೋಮಣ್ಣ, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರ್ ಹಾಗೂ ಮಾಲೀಕಯ್ಯ ಗುತ್ತೇದಾರ್ ಅವರನ್ನ ನೇಮಿಸಲಾಗಿದೆ ಎಂದು ಹೇಳಿದ್ರು.

ದೆಹಲಿ ಮತ್ತು ವಾರಣಾಸಿ ಸೇರಿದಂತೆ ಹಲವು ಭಾಗಗಳಲ್ಲಿ ರಾಜ್ಯದ ಬಿಜೆಪಿ ಮುಖಂಡರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಆಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಚುನಾವಣಾ ಅಯೋಗಕ್ಕೆ ಮಾಹಿತಿ ಸಲ್ಲಿಸಲು ಚರ್ಚೆ ನಡೆಸಲಾಗಿದೆ. ಹಾಸನದಲ್ಲಿ ಪೊಲೀಸ್ ಜೀಪ್ ನಲ್ಲಿ ಹಣ ಸಾಗಿಸಿದ್ದು ಸೇರಿದಂತೆ ಚುನಾವಣಾ ಅಕ್ರಮಗಳ ಬಗ್ಗೆ ಕೂಡಾ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv