‘ಇಬ್ಬರೂ ಸಚಿವರು ‘ಮಾತಾಡಿಕೊಂಡು’ ವಿಧಾನಸೌಧದಲ್ಲಿ ಬ್ಯುಸಿನೆಸ್​​ ಮಾಡ್ತಾ ಇದ್ದಾರೆ’

ದಾವಣಗೆರೆ: ವಿಧಾನಸೌಧದ ಮೇಲೆ ‘ಸರಕಾರದ ಕೆಲಸ ದೇವರ ಕೆಲಸ’ ಎಂಬ ವಾಕ್ಯ ಬರೆಯಲಾಗಿದೆ. ಹಾಗಾದರೆ ಸಚಿವ ಪುಟ್ಟರಂಗ ಶೆಟ್ಟಿಯವರು ಮಾಡಿದ್ದೇನು? ಯಾವ ದೇವರ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್​​. ರವಿಕುಮಾರ್​​​ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಗೆ ಅಕ್ರಮ ಹಣ ಸಾಗಿಸುತ್ತಿದ್ದ ವೇಳೆ ಟೈಪಿಸ್ಟ್​​ ಮೋಹನ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಟೈಪಿಸ್ಟ್​ ಮೋಹನ ಮಾಡಿದ್ದು ಏನು? ಎಂದು ರವಿಕುಮಾರ್​ ಪ್ರಶ್ನಿಸಿದರು. ಟೈಪಿಸ್ಟ್​​ ಮೋಹನನನ್ನು ತನಿಖೆಗೆ ಒಳಪಡಿಸಿದಾಗ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರ ಆಪ್ತ ಸಹಾಯಕ ಕೃಷ್ಣಮೂರ್ತಿ ಹೆಸರು ಹೇಳಿದ್ದಾರೆ. ಸಚಿವರಾದ ಪುಟ್ಟರಂಗ ಶೆಟ್ಟಿ ಹಾಗೂ ವೆಂಕಟರಮಣಪ್ಪ ಅವರ ಕಚೇರಿಗಳು ವಿಧಾನಸೌಧದಲ್ಲಿ ಅಕ್ಕಪಕ್ಕದಲ್ಲಿವೆ. ಇಬ್ಬರೂ ಸಚಿವರು ಮಾತಾಡಿಕೊಂಡು ಬ್ಯುಸಿನೆಸ್​​ ಮಾಡ್ತಾ ಇದ್ದೀರಾ? ಎಂದು ಪ್ರಶ್ನಿಸಿ, ಈ ಇಬ್ಬರು ಸಚಿವರನ್ನು ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಪುಟ್ಟರಂಗ ಶೆಟ್ಟಿ ರಾಜೀನಾಮೆಗೆ ಆಗ್ರಹಿಸಿ ನಾಳೆ ಹಾಗೂ ನಾಡಿದ್ದು ರಾಜ್ಯದಾದ್ಯಂತ ಬಿಜೆಪಿ ಹೋರಾಟಕ್ಕೆ ಕರೆ ಕೊಟ್ಟಿದೆ ಎಂದು ರವಿಕುಮಾರ್​​ ಹೇಳಿದರು.