ಸಿಎಜಿ ವರದಿಯಲ್ಲಿ ಸಿದ್ದು ಸರ್ಕಾರದ ಭ್ರಷ್ಟಾಚಾರ ಬಹಿರಂಗ: ಬಿಜೆಪಿ

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರು ಇಂದು ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ, 2016-17 ನೇ ಸಾಲಿನ ಸಿಎಜಿ ವರದಿಯಲ್ಲಿನ ಲೋಪದೋಷಗಳ ಬಗ್ಗೆ ಕಿರುಪುಸ್ತಕ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮತ್ತು ಶಾಸಕ ಡಾ. ಅಶ್ವತ್ ನಾರಾಯಣ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

2016-17 ನೇ ಸಾಲಿನ ಸಿಎಜಿ ವರದಿಯಲ್ಲಿ ಖರ್ಚು ಮತ್ತು ಸ್ವೀಕೃತಿ ಟ್ಯಾಲಿ ಆಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ 2016-17 ರ ಆಯವ್ಯಯದಲ್ಲಿ 35 ಸಾವಿರ ಕೋಟಿ ರೂ.ಗಳಿಗೆ ನೀಡಿರುವ ವೆಚ್ಚ ಮತ್ತು ಸ್ವೀಕೃತಿ ಲೆಕ್ಕ ತಾಳೆ ಆಗುತ್ತಿಲ್ಲ. ಹಾಗಾಗಿ ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಶ್ವತ್ ನಾರಾಯಣ ಆಗ್ರಹಿಸಿದ್ದಾರೆ.

ಹಿಂದಿನ ಸರ್ಕಾರದಲ್ಲಿ ಕೋಟಿ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿಯೇ ಹೇಳ್ತಿದೆ. ಸಿಎಜಿ ವರದಿಯಿಂದಲೇ 2 ಜಿ, ಕೋಲಂ, ಕಾಮನ್‌ವೆಲ್ತ್, ಆದರ್ಶ ಹೌಸಿಂಗ್ ಅವ್ಯವಹಾರ ಬೆಳಕಿಗೆ ಬಂದಿದ್ದು. ಹಾಗಾಗಿ ಈ ವರದಿಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ಇದರ ಬಗ್ಗೆ ಮತ್ತೊಮ್ಮೆ ಪಬ್ಲಿಕ್ ಡಿಬೇಟ್ ಆಗಬೇಕು ಎಂದು ರವಿಕುಮಾರ್ ಹೇಳಿದ್ದಾರೆ.

788 ಕೆರೆಗೆ ನೀರು ತುಂಬಿಸಲು 1,500 ಕೋಟಿ ಬಿಡುಗಡೆಯಾಗಿದೆ. ಆದರೆ ಕೆರೆಗೆ ನೀರೆ ತುಂಬಿಲ್ಲ. ಸಮವಸ್ತ್ರ ವಿಷಯದಲ್ಲಿ ಅಗತ್ಯಕ್ಕಿಂತ ಅಧಿಕ ಸಮವಸ್ತ್ರ ಖರೀದಿಸಲಾಗಿದೆ. ಇದರಲ್ಲಿಯೂ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. 1 ಕೋಟಿ 77 ಲಕ್ಷ ಹಗರಣ ಸಮವಸ್ತ್ರ ಖರೀದಿಯಲ್ಲಿ ನಡೆದಿದೆ. ಇನ್ನು ಲ್ಯಾಪ್ ಟಾಪ್ ಖರೀದಿಗೆ ಎಂದು ತೆಗೆದಿಟ್ಟ ಹಣ ಇನ್ನೂ ಬ್ಯಾಂಕ್​​ನಲ್ಲೇ ಇದೆ. ಕ್ಯಾಬಿನೆಟ್ ಅನುಮೋದನೆ ಇಲ್ಲದೆ 7378.34 ಕೋಟಿ ಮೌಲ್ಯದ ಕಾಮಗಾರಿ ನಡೆಸಲಾಗಿದೆ. 254 ಕೋಟಿ ರೂಪಾಯಿಗೆ ಬಳಕೆ ಪ್ರಮಾಣ ಪತ್ರವನ್ನೇ ಕೊಟ್ಟಿಲ್ಲ. ಕುಡಿಯುವ ನೀರಿಗೆ 612 ಕೋಟಿ ತೆಗೆದಿರಿಸಿದೆ. ಆದರೆ ಇನ್ನೂ ಖರ್ಚು ಮಾಡಿಲ್ಲ. 12 ಸಾವಿರ ಕೋಟಿ ರುಪಾಯಿಯನ್ನು ಖರ್ಚು ಮಾಡಿಲ್ಲ. ಆದರೆ ಕುಮಾರಸ್ವಾಮಿಯವರು ಮಂಡಿಸಿದ ಬಜೆಟ್​​​ನಲ್ಲಿ ಯಾಕೆ ಈ ಹಣದ ಲೆಕ್ಕ ಕೊಟ್ಟಿಲ್ಲ. ಆ ಹಣ ಎಲ್ಲಿದೆ? ಬಜೆಟ್​​ನಲ್ಲಿ ಈ ಉಳಿಕೆ ಹಣ ತೋರಿಸಿಲ್ಲ. ಶಾಸಕಾಂಗದ ಅನುಮೋದನೆ ಇಲ್ಲದೆ 6057 ಕೋಟಿ ಮೊತ್ತವನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರು ಹಿಂದಿನ ಸರ್ಕಾದಲ್ಲಿ ನಡೆದ ಅಕ್ರಮಗಳ ಬಗ್ಗೆ ವಿವರ ನೀಡಿದರು.

ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ 290.98 ಕೋಟಿ ರೂಪಾಯಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ಬಳಕೆ ಮಾಡಿದ್ದು 222.48 ಕೋಟಿ ರುಪಾಯಿ ಮಾತ್ರ. ನಗರಾಭಿವೃದ್ಧಿ ಇಲಾಖೆಯಲ್ಲಿ 5625 ಬಿಲ್ಲುಗಳಲ್ಲಿ ನೀರು ಬಳಕೆಯಾಗಿದ್ದರೂ ಬಿಲ್ಲಿನ ಮೊತ್ತ ಶೂನ್ಯ ಅಂತ ಸೂಚಿಸಿದೆ. ಅಧಿಕಾರಿಗಳ ಅಸಡ್ಡೆಯಿಂದಾಗಿ ಕೋಟ್ಯಂತರ ರುಪಾಯಿ ಸರ್ಕಾರದ ಬೊಕ್ಕಸಕ್ಕೆ ಲಾಸ್ ಆಗಿದೆ ಎಂದು ರವಿಕುಮಾರ್ ವಿವರಿಸಿದ್ದಾರೆ.