ಬಿಜೆಪಿಯವರು ಹೊರಗಡೆ ಹೋಗುವುದಕ್ಕೂ ಬಿಡ್ತಿಲ್ಲವಂತೆ..!

ರಾಮನಗರ: ಬಿಜೆಪಿಯವರು ಹೊರಗಡೆ ಹೋಗುವುದಕ್ಕೂ ಬಿಡುತ್ತಿಲ್ಲ, ಏರ್​​ಪೋರ್ಟ್​​​​ಗೆ ಹೋಗೋದಕ್ಕೂ ತಡೆಯವ ಯತ್ನ ನಡೆಸಿದ್ದಾರೆ. ಹಾಗಾಗಿ ಎಲ್ಲಿಗೆ ಹೋಗಬೇಕೆಂಬುದು ಇನ್ನೂ ತೀರ್ಮಾನವಾಗಿಲ್ಲ ಅಂತ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬಿಡದಿಯ ಈಗಲ್​​ಟನ್ ರೆಸಾರ್ಟ್ ಬಳಿ ಮಾತನಾಡಿದ ಅವರು, ತಮಿಳುನಾಡು, ಗೋವಾ, ಕೊಚ್ಚಿ, ಪಂಜಾಬ್​ ಸೇರಿದಂತೆ ಕೆಲ ರಾಜ್ಯಗಳಿಗೆ ಹೋಗುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು. ಅಲ್ಲದೇ ಜೆಡಿಎಸ್ ಹಾಗೂ ನಮ್ಮ ಶಾಸಕರೂ ಒಟ್ಟಿಗೆ ಇದ್ದರೆ ಒಳ್ಳೆಯದಲ್ಲವಾ?, ಹಾಗಾಗಿ ಒಂದೇ ಕಡೆ ಇರುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.

ನಾವಲ್ಲ.. ಗೂಂಡಾಗಿರಿ ಮಾಡ್ತಿರೋದು ಬಿಜೆಪಿಯವ್ರು..
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಡಿಕೆಶಿ, ನಾವೇನು ಗೂಂಡಾಗಿರಿ ಮಾಡ್ತಿದ್ದೇವಾ? ಅದನ್ನ ಮಾಡ್ತಿರೋದು ಬಿಜೆಪಿಯವರು. ಅಣ್ಣಾಮಲೈ ಅವರನ್ನ ರಾಮನಗರ ಜಿಲ್ಲೆಗೆ ವರ್ಗಾಯಿಸಿದ್ದಾರೆ. ಅಲ್ಲದೇ ರೆಸಾರ್ಟ್​​​ ಬಳಿ ಒದಗಿಸಿದ್ದ ಪೋಲಿಸ್ ಭದ್ರತೆಯನ್ನ ವಾಪಸ್ ತೆಗೆದುಕೊಳ್ಳಲಾಗಿದೆ. ಇದೆಲ್ಲಾ ಗೂಂಡಾಗಿರಿ ಅಲ್ಲದೆ ಮತ್ತೇನು ಅಂತಾ ಪ್ರಶ್ನಿಸಿದರು. ಬಿಜೆಪಿಯವರು ಬಹುಮತ ಸಾಬೀತುಪಡಿಸೋಕೆ ಏನೆಲ್ಲಾ ಮಾಡ್ತಿದಾರೆ ಅಂತ ಗೊತ್ತಿದೆ, ಜನಾರ್ದನ ರೆಡ್ಡಿ ನಮ್ಮ ಶಾಸಕರಿಗೆಲ್ಲ ಕರೆ ಮಾಡುತ್ತಿದ್ದಾರೆ. ರೆಡ್ಡಿ ಆಪರೇಷನ್ ಜವಾಬ್ದಾರಿ ವಹಿಸಿಕೊಂಡಂತಿದೆ. ಹಾಗಾಗಿಯೇ ಶಾಸಕರ ಸಂಪರ್ಕಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸ್ತಿದ್ದಾರೆ ಅಂತ ಆರೋಪಿಸಿದರು.

ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಕೆ.ಜೆ. ಜಾರ್ಜ್, ನಾವೇನು ರೆಸಾರ್ಟ್​​​ಗೆ ಭದ್ರತೆ ಕೇಳಿರಲೇ ಇಲ್ಲಾ, ಪೋಲಿಸರನ್ನೇ ನಂಬಿ ಯಾವ ಕೆಲಸವನ್ನ ಮಾಡೋದಿಲ್ಲ. ಬಿಜೆಪಿಯವರು ಭದ್ರತೆ ವಾಪಾಸ್ ಪಡೆದಿದ್ದಾರೆ. ಅಧಿಕಾರ ದುರುಪಯೋಗ ಯಾರ್ ಮಾಡ್ತಿದ್ದಾರೆ ಅನ್ನೋದು ಜನರಿಗೆ ಗೊತ್ತಾಗುತ್ತಿದೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕೆ ಸಂಪರ್ಕಿಸಿ: contact@firstnews.tv