ದೆಹಲಿಯಲ್ಲಿಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ

ನವದೆಹಲಿ: ದೆಹಲಿಯಲ್ಲಿ ಇಂದಿನಿಂದ 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಕಾರ್ಯಕಾರಿಣಿ ನಡೆಯಲಿದೆ. ಕಾರ್ಯಕಾರಿಣಿಯಲ್ಲಿ ಲೋಕಸಮರಕ್ಕೆ ಪಕ್ಷ ಸಂಘಟನೆ, ಬೇರು ಮಟ್ಟದಿಂದ ಪಕ್ಷವನ್ನು ಬಲಗೊಳಿಸಲು ನಾಯಕರು ಮುಂದಾಗಿದ್ದಾರೆ. ದೆಹಲಿಯ ರಾಮ್‌ಲೀಲ್ ಮೈದಾನದಲ್ಲಿ ಕಾರ್ಯಕಾರಿಣಿ ನಡೆಯಲಿದ್ದು, 12 ಸಾವಿರಕ್ಕೂ ಅಧಿಕ ಬಿಜೆಪಿ ನಾಯಕರು ಕಾರ್ಯಕಾರಿಣಿಯಲ್ಲಿ ಭಾಗಿಯಾಗಲಿದ್ದಾರೆ. ಇಂದಿನ ಮೊದಲ ಸಭೆಯನ್ನು ಅಮಿತ್ ಶಾ ಉದ್ಘಾಟಿಸಲಿದ್ದು, ಕೇಂದ್ರ ಸಚಿವರು ಹಾಗೂ ಕೆಲ ಹಿರಿಯ ಮುಖಂಡರು ಭಾಷಣ ಮಾಡಲಿದ್ದಾರೆ.
ಈಗಾಗಲೇ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ದೆಹಲಿಗೆ ತಲುಪಿದ್ದಾರೆ. ಕೇಂದ್ರ ಸಚಿವರಾದ ಅನಂತ್‌ ಕುಮಾರ್ ಹೆಗಡೆ, ಡಿ.ವಿ.ಸದಾನಂದಗೌಡ, ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲಾ ಬಿಜೆಪಿ ಸಂಸದರು, ಶಾಸಕರು, ವಕ್ತಾರರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಇವತ್ತಿನ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಮಹಾಸಮರಕ್ಕೆ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳು, ಎದುರಾಳಿ ಪಕ್ಷಗಳನ್ನು ಯಾವ ರೀತಿ ಎದುರಿಸುವುದು, ಚುನಾವಣಾ ಕಾರ್ಯತಂತ್ರ, ಪ್ರತಿಪಕ್ಷಗಳ ತಂತ್ರಕ್ಕೆ ಕಾರ್ಯತಂತ್ರ, ಪ್ರಣಾಳಿಕೆ ಸಿದ್ಧಪಡಿಸುವಿಕೆ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಕೈಗೊಳ್ಳಬೇಕಾದ ರಣತಂತ್ರಗಳ ಬಗ್ಗೆ ಅಭಿಪ್ರಾಯ ಪಡೆಯಲಿದ್ದಾರೆ. ಬಿಜೆಪಿ ಆಡಳಿತವಿರುವ ಮುಖ್ಯಮಂತ್ರಿಗಳು ಎಲ್ಲಾ ರಾಜ್ಯ ಘಟಕಗಳ ಅಧ್ಯಕ್ಷರು, ಕೇಂದ್ರ ಸಚಿವರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಜಿಲ್ಲಾಧ್ಯಕ್ಷರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಗಳ ಉಸ್ತುವಾರಿಗಳು, ಸಹ ಉಸ್ತುವಾರಿಗಳು, ಸಾಮಾಜಿಕ ಜಾಲತಾಣದ ಮುಖ್ಯಸ್ಥರು, ವಕ್ತಾರರು ಸೇರಿದಂತೆ ಎಲ್ಲ ರಾಜ್ಯಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.