ಕೊಟ್ಟವನು ಕೋಡಂಗಿ, ಇಸ್ಕೊಂಡೋನು ಈರಭದ್ರ: ಸಿ.ಟಿ.ರವಿ ವ್ಯಂಗ್ಯ

ಬೆಂಗಳೂರು: ಕೊಟ್ಟವನು ಕೋಡಂಗಿ, ಇಸ್ಕೊಂಡೋನು ಈರಭದ್ರ ಎಂಬ ಸಾಲದ ಗಾದೆ ಮಾತು ಈಗ ಸಾಲ ಕಟ್ಟಿದವನು ಕೋಡಂಗಿ, ಸಾಲ ಕಟ್ಟದವನು ಈರಭದ್ರ ಎಂಬಂತಾಗಿದೆ ಎಂದು ವಿಧಾನಸಭೆಯಲ್ಲಿ ಬಿಜೆಪಿಯ ಸಿ.ಟಿ.ರವಿ ಲೇವಡಿ ಮಾಡಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಸಿ.ಟಿ.ರವಿ, ಸಾಲದ ಸರತಿ ಸಾಲಿನಲ್ಲಿ ಕೂತ ರೈತರಿಗೆ ಸರ್ಕಾರ ಪಂಕ್ತಿಬೇಧ ಮಾಡುತ್ತಿದೆ‌. ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಪ್ರಸ್ತಾಪವೇ ಇಲ್ಲದ ಈ ಬಜೆಟ್ ಸಮದೃಷ್ಟಿಯ ಬಜೆಟ್ ಅಲ್ಲವೇ ಅಲ್ಲ ಎಂದರು.

ಅಲ್ಲದೇ, ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವುದಾಗಿ ಹಿಂದಿನ ಸರ್ಕಾರದ ಬಜೆಟ್​ ನಲ್ಲಿ ಸಿದ್ದರಾಮಯ್ಯ ಘೋಷಿಸಿದ್ದರು‌. ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ₹ 18,000 ಕೋಟಿ ಬೇಕು. ಆದರೆ ಈಗ ಕುಮಾರಸ್ವಾಮಿಯವರು ತಮ್ಮ ಬಜೆಟ್​ನಲ್ಲಿ ಸಿದ್ದರಾಮಯ್ಯನವರ ಬಜೆಟ್ ಮುಂದುವರಿಸುವುದಾಗಿ ಹೇಳಿದ್ದಾರೆ‌. ಆದರೆ ಬಜೆಟ್‌ನಲ್ಲಿ ಅಲೋಕೇಶ್ ಇಲ್ಲ. ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ, ಉಚಿತ ಬಸ್ ಪಾಸ್ ವಿತರಣೆ ಯೋಜನೆಗಳಿಗೂ ಕುಮಾರಸ್ವಾಮಿಯವರ ಬಜೆಟ್​ನಲ್ಲಿ ಹಣ ಮೀಸಲಿಟ್ಟಿಲ್ಲ ಎಂದು ಹೇಳಿದರು.

ಇದಕ್ಕೆ ಜೆಡಿಎಸ್​ನ ಅನ್ನದಾನಿ ಆಕ್ಷೇಪ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕಕ್ಕೆ ಯಾವ ವಿಷಯದಲ್ಲಿ ಅನುದಾನ ಕಡಿಮೆ ಮಾಡಲಾಗಿದೆ ಎಂದು ವಿವರಿಸಿ ಎಂದು ಸವಾಲು ಹಾಕಿದರು. ಉತ್ತರ ಕರ್ನಾಟಕದಲ್ಲಿ ಒಂದೇ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೋರಿಸಿ ಎಂದು ನಡಹಳ್ಳಿ ಮರು ಸವಾಲು ಹಾಕಿದರು. ಗುಲ್ಬರ್ಗದಲ್ಲಿ ₹ 25 ಕೋಟಿ ಅಂದಾಜು ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಕಾಮಗಾರಿ ನಡೆಯುತ್ತಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮಾಹಿತಿ ನೀಡಿದರು. ಅನ್ನದಾನಿ ಮಧ್ಯ ಪ್ರವೇಶಕ್ಕೆ ನಡಹಳ್ಳಿ ಆಕ್ಷೇಪಿಸಿದರು. ನಡಹಳ್ಳಿ ಸಮರ್ಥನೆಗೆ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಧಾವಿಸಿದರೆ, ಅನ್ನದಾನಿ ಸಮರ್ಥನೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಿಂತರು. ಸದನದಲ್ಲಿ ಗದ್ದಲ ಶುರುವಾಗಿ, ಯಡಿಯೂರಪ್ಪ ಹಾಗೂ ಶಿವಕುಮಾರ್ ನಡುವೆ ವಾಗ್ವಾದ ಏರ್ಪಟ್ಟಿತು. ಪ್ರತಿ ಪಕ್ಷದವರಿಲ್ಲದೆ ಸದನ ನಡೆಸೋದು ಸರಿಯಲ್ಲ. ಸದನವನ್ನು ಸ್ವಲ್ಪಕಾಲ ಮುಂದೂಡಿ ಎಂದು ಜೆಡಿಎಸ್​ನ ಎ.ಟಿ.ರಾಮಸ್ವಾಮಿ ನೀಡಿದ ಸಲಹೆಯನ್ನು ಮಾನ್ಯ ಮಾಡಿದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ, ಸದನವನ್ನು 15 ನಿಮಿಷ ಮುಂದೂಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv