ಒಂದು ವೇಳೆ ಚಂದ್ರಶೇಖರ್‌ ಗೆದ್ರೆ ರಾಮನಗರದಲ್ಲಿ ಮತ್ತೆ ಚುನಾವಣೆ: ಹೇಗೆ ಗೊತ್ತಾ?

ಬೆಂಗಳೂರು: ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಲ್.ಚಂದ್ರಶೇಖರ್​ ಚುನಾವಣಾ ಆಖಾಡದಿಂದ ಹಿಂದೆ ಸರಿದ ಪರಿಣಾಮ ಮುಂದೇನಾಗುತ್ತೆ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಕಣದಿಂದ ಹಿಂದೆ ಸರಿದ ಬೆನ್ನಲ್ಲೇ ಬಿಜೆಪಿ ನಾಯಕರು ಆಯೋಗಕ್ಕೆ ಪತ್ರ ಬರೆದು ಮತದಾನ ದಿನ ಮುಂದೂಡಲು ಮನವಿ ಮಾಡುತ್ತಿದ್ದಾರೆ. ಆದ್ರೆ ಇತ್ತ ಮತದಾರರು ಮತದಾನ ಮಾಡಲು ರೆಡಿಯಾಗಿದ್ದು, ಆಯೋಗ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು 7 ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಜೆಡಿಎಸ್​ ಮತ್ತು ಬಿಜೆಪಿಯ ಒಬ್ಬೊಬ್ಬ ಅಭ್ಯರ್ಥಿ ಹಾಗೂ 5 ಮಂದಿ ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿ ಚುನಾವಣೆ ಎದುರಿಸುತ್ತಿದ್ದಾರೆ.

ಒಂದು ವೇಳೆ ಕಣದಿಂದ ಹಿಂದೆ ಸರಿದಿರುವ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್​ಗೆ ಅತೀ ಹೆಚ್ಚು ಮತಗಳು ಲಭಿಸಿದ್ರೆ, ಅದನ್ನು ಚುನಾವಣಾ ಆಯೋಗ ಗಣನೆಗೆ ತೆಗೆದುಕೊಳ್ಳದೇ ಮರು-ಚುನಾವಣೆಯನ್ನು ನಡೆಸಬೇಕಾಗುತ್ತದೆ. ಯಾಕಂದ್ರೆ, ಈಗಾಗಲೇ ಬಿಜೆಪಿಯ ಎಲ್.ಚಂದ್ರಶೇಖರ್​​ ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ. ನನ್ನ ಸಂಪೂರ್ಣ ಬೆಂಬಲ ಜೆಡಿಎಸ್​ನ ಅನಿತಾ ಕುಮಾರಸ್ವಾಮಿ ಅವರಿಗೆ ಎಂಬ ಪತ್ರವನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ವೇಳೆ ಚಂದ್ರಶೇಖರ್​ ಜಯ ಗಳಿಸಿದ್ರೂ ಅದನ್ನು ತಡೆ ಹಿಡಿಯುವ ಅಧಿಕಾರ ಆಯೋಗಕ್ಕಿದೆ.

ಎಲ್.ಚಂದ್ರಶೇಖರ್​ ವಿರುದ್ಧ ಕಣದಲ್ಲಿರುವ 6 ಅಭ್ಯರ್ಥಿಗಳ ಪೈಕಿ ಯಾರೇ ಹೆಚ್ಚಿನ ಮತಗಳನ್ನು ಪಡೆದುಕೊಂಡ್ರೂ ಅವರೇ ಶಾಸಕರಾಗಲಿದ್ದಾರೆ. ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಈಗ ಬಿಜೆಪಿಯ ಅಭ್ಯರ್ಥಿ ಎಲ್.ಚಂದ್ರಶೇಖರ್​ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೇ ಹಿಂದೆ ಸರಿದಿರುವುದರಿಂದ ಆಯೋಗಕ್ಕೆ ಮತದಾನ ಮುಂದೂಡಿಕೆ ಮನವಿಯನ್ನು ಮಾಡಬಹುದು. ಬಿಜೆಪಿ ಒಂದು ವೇಳೆ ಮನವಿ ಮಾಡಿ ಪತ್ರವನ್ನು ಆಯೋಗಕ್ಕೆ ನೀಡಿದ್ದೇ ಅದ್ರೆ, ಅದನ್ನು ಪುರಸ್ಕರಿಸಿ ಮತದಾನವನ್ನು ಮುಂದೂಡುವ ಅಧಿಕಾರ ಆಯೋಗದ ಆಯುಕ್ತರಿಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv