‘ಮುಂಬೈಗೆ ಹೋಗಿದ್ದೆ ಎಂಬುದೆಲ್ಲಾ ಸುಳ್ಳು, ಬೆಂಗಳೂರಿಗೆ ಆಗಾಗ ಬಂದು ಹೋಗ್ತಿದ್ದೆ’

ಬೆಂಗಳೂರು: ಹೆಚ್ಚು ಕಡಿಮೆ ಈಗ ಎಲ್ಲವೂ ಮುಗಿದು ಹೋಗಿದೆ. ಈಗಾಗಲೇ ಕಾಂಗ್ರೆಸ್​​ನ ಅತೃಪ್ತ ಶಾಸಕರು ಸೆಟ್ಲ್ ಆಗಿದ್ದಾರೆ. ಅವರ ಗೊಂದಲವೆಲ್ಲವೂ ಬಗೆಹರಿದಿದೆ ಅನಿಸುತ್ತೆ. ನಾನು ಮುಂಬೈಗೆ ಹೋಗಿದ್ದೆ ಅನ್ನೋದೆಲ್ಲ ಸುಳ್ಳು. ಬೆಂಗಳೂರಿಗೆ ಆಗಾಗ್ಗೆ ಬಂದು ಹೋಗೋತ್ತಿದ್ದೆ ಅಷ್ಟೇ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ದಿನ ಬೆಳಗಾದರೆ ಅವರು ಅಲ್ಲೋದ್ರಂತೆ, ಇಲ್ಲೋದ್ರಂತೆ ಅನ್ನೋದನ್ನೇ ಕೇಳುತ್ತಿದ್ದೇವೆ. ಜನರು ಇದನ್ನೆಲ್ಲಾ ನೋಡಿ ಬೇಸತ್ತು ಹೋಗಿದ್ದಾರೆ. ಹಾಗಾಗಿಯೇ ಇದನ್ನೆಲ್ಲಾ ಬಿಟ್ಟು ಲೋಕಸಭಾ ಚುನಾವಣೆ ಕಡೆ ಗಮನಹರಿಸೋದು ಉತ್ತಮ. ಅತೀ ಹೆಚ್ಚು ಶಾಸಕರನ್ನ ಹೊಂದಿದ್ದಾಗ ಸರ್ಕಾರ ರಚನೆ ಉತ್ಸಾಹ ಇದ್ದೇ ಇರುತ್ತೆ. ಜನ ಇನ್ನು ಹತ್ತು ಸ್ಥಾನ ಕೊಟ್ಟಿದಿದ್ರೆ ಎಲ್ಲಾ ಆಗುತ್ತಿತ್ತು. ಆದ್ರೆ, ಈಗ ಏನು ಮಾಡಲು ಆಗುತ್ತೆ ಹೇಳಿ? ಎಂದು ಪ್ರಶ್ನೆ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಅವರನ್ನ ಭೇಟಿ ಮಾಡಿ ಒಂದೂವರೆ ತಿಂಗಳಾಗಿತ್ತು. ಹಾಗಾಗಿ ಇಂದು ಭೇಟಿಯಾಗಿದ್ದೇನೆ ಅಷ್ಟೇ. ಆದರೆ, ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಲಿಲ್ಲ. ಅವರು ನನಗಿಂತ ದೊಡ್ಡವರು. ಕುಟುಂಬದ ವಿಚಾರ ಬಂದಾಗ ಸಲಹೆ ಕೊಟ್ಟಿದ್ದೇನೆ. ಆದರೆ, ಅವರ ಪಕ್ಷದ ವಿಚಾರಕ್ಕೆ ನಾನು ಯಾಕೆ ತಲೆ ಹಾಕಲಿ. ಆಡಿಯೋ ಪ್ರಕರಣ ಈಗಾಗಲೇ ತನಿಖೆಯ ಹಂತದಲ್ಲಿದೆ. ಇದರ‌ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv